ಇಬ್ಬರು ರೈಲ್ವೆ ಪೊಲೀಸರು ಸೇರಿ ಆರು ಮಂದಿಯಿಂದ 22 ವರ್ಷದ ಯುವತಿ ಮೇಲೆ ಪದೇ ಪದೆ ಅತ್ಯಾಚಾರ; ದೂರು ದಾಖಲು

ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Representative Image
ಸಾಂಕೇತಿಕ ಚಿತ್ರ
Updated on

ಯಾದಗಿರಿ: ರಾಜ್ಯದ ವಿವಿಧ ಸ್ಥಳಗಳಲ್ಲಿ 22 ವರ್ಷದ ಯುವತಿ ಮೇಲೆ ಪದೇ ಪದೆ ಲೈಂಗಿಕ ದೌರ್ಜನ್ಯ ಎಸಗಿದ, ಬೆದರಿಕೆ ಹಾಕಿದ ಮತ್ತು ಅಕ್ರಮವಾಗಿ ಬಂಧಿಸಿಟ್ಟ ಆರೋಪದ ಮೇಲೆ ಇಬ್ಬರು ರೈಲ್ವೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ತುರ್ತು ಸ್ಪಂದನಾ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ನಂತರ ಸಂತ್ರಸ್ತೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಹೆಸರಿಸಲಾದ ಆರೋಪಿಗಳಲ್ಲಿ ಮಲ್ಲು ಅಲಿಯಾಸ್ ಮಲ್ಲಪ್ಪ, ರೈಲ್ವೆ ಪೊಲೀಸ್ ಸಿಬ್ಬಂದಿ ಶರಣಪ್ಪ, ಗುರುತಿಸಲಾಗದ ಮತ್ತೊಬ್ಬ ರೈಲ್ವೆ ಪೊಲೀಸ್ ಸಿಬ್ಬಂದಿ, ಮಹೇಶ್, ಆಕಾಶ್ ಅಲಿಯಾಸ್ ಪಪ್ಪು ಮತ್ತು ಹರ್ಷ ಅಲಿಯಾಸ್ ಸುಧಾಕರ್ ಸೇರಿದ್ದಾರೆ.

ಪೊಲೀಸ್ ವರದಿ ಪ್ರಕಾರ, ಕೌಟುಂಬಿಕ ಸಮಸ್ಯೆಗಳಿಂದಾಗಿ ನೊಂದಿದ್ದ ಸಂತ್ರಸ್ತೆ ರೈಲಿನಲ್ಲಿ ಬೆಂಗಳೂರಿನಿಂದ ಯಾದಗಿರಿಯವರೆಗೆ ಪ್ರಯಾಣಿಸಿದ್ದರು. ನಸುಕಿನ ಜಾವ ಯಾದಗಿರಿ ರೈಲು ನಿಲ್ದಾಣದ ಕಾಯುವ ಪ್ರದೇಶದಲ್ಲಿ ಕುಳಿತಿದ್ದಾಗ, ಅದೇ ರೈಲಿನಲ್ಲಿ ಪ್ರಯಾಣಿಸಿದ್ದಾಗಿ ಹೇಳಿಕೊಂಡ ಮಲ್ಲಪ್ಪ ಎಂಬಾತ ಆಕೆಯ ಬಳಿ ತೆರಳಿ ಸಹಾಯ ಮಾಡುವುದಾಗಿ ಹೇಳಿದ್ದಾನೆ.

ಮದುವೆ ನೆಪದಲ್ಲಿ ಆಕೆಯ ವಿಶ್ವಾಸ ಗಳಿಸಿದ ಮಲ್ಲಪ್ಪ, ಆಕೆಯನ್ನು ರೈಲು ನಿಲ್ದಾಣದ ಪ್ರದೇಶದಲ್ಲಿದ್ದ ತನ್ನ ಸಂಬಂಧಿಕರ ಮನೆ ಎಂದು ಹೇಳಲಾದ ಮನೆಗೆ ಕರೆದೊಯ್ದಿದ್ದಾನೆ. ಆಕೆ ಪ್ರತಿರೋಧವೊಡ್ಡಿದರೂ ಲೈಂಗಿಕ ದೌರ್ಜನ್ಯ ಎಸಿಗಿದ್ದಾನೆ ಎಂದು ಆರೋಪಿಸಲಾಗಿದೆ. ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಬಂದ ಶರಣಪ್ಪ ಸೇರಿದಂತೆ ಇಬ್ಬರು ರೈಲ್ವೆ ಪೊಲೀಸ್ ಸಿಬ್ಬಂದಿ ಸಂತ್ರಸ್ತೆಯನ್ನು ಬೆದರಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

Representative Image
ಹದಿಹರೆಯದ ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣ: ಇಬ್ಬರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ!

ನಂತರ ಮಲ್ಲಪ್ಪ ಆಕೆಯನ್ನು ರೈಲು ನಿಲ್ದಾಣದಲ್ಲಿ ಬಿಟ್ಟುಹೋಗಿದ್ದಾರೆ. ಬಳಿಕ ಮಹೇಶ್ ಎಂಬ ಇನ್ನೊಬ್ಬ ಆರೋಪಿ ಆಕೆಯ ಬಳಿ ಬಂದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮಲ್ಲಪ್ಪ ತನ್ನನ್ನು ಕಳುಹಿಸಿದ್ದಾಗಿ ಹೇಳಿದ್ದಾನೆ. ಆದರೆ, ಆತ ಆಕೆಯನ್ನು ಹೊಸ ಬಸ್ ನಿಲ್ದಾಣದ ಸಮೀಪವಿರುವ ಸ್ಥಳೀಯ ಲಾಡ್ಜ್‌ವೊಂದಕ್ಕೆ ಕರೆದೊಯ್ದು, ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಲಾಗಿದೆ.

ನಂತರ ಸಂತ್ರಸ್ತೆ ಕಲಬುರಗಿಗೆ ತೆರಳಿದ್ದಾರೆ. ಅದಾದ ಸುಮಾರು ಒಂದು ತಿಂಗಳ ನಂತರ ಮಲ್ಲಪ್ಪ ಆಕೆಯನ್ನು ಪತ್ತೆಹಚ್ಚಿ, ಮದುವೆಯಾಗುವ ಭರವಸೆಯನ್ನು ಪುನರುಚ್ಚರಿಸಿದ್ದಾನೆ. ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸುವ ನೆಪದಲ್ಲಿ ಆಕೆಯನ್ನು ಶಹಾಪುರಕ್ಕೆ ಕರೆದೊಯ್ದು, ಅಲ್ಲಿನ ಲಾಡ್ಜ್‌ವೊಂದರಲ್ಲಿ ಆಕೆಯ ಮೇಲೆ ಮತ್ತೆ ದೌರ್ಜನ್ಯ ನಡೆಸಿದ್ದಾನೆಂದು ಆರೋಪಿಸಲಾಗಿದೆ.

ಸಂತ್ರಸ್ತೆ ನಂತರ ಬೆಂಗಳೂರಿಗೆ ಮರಳಲು ಯಾದಗಿರಿ ರೈಲು ನಿಲ್ದಾಣಕ್ಕೆ ಬಂದಾಗ, ರಮೇಶ್, ಆಕಾಶ್ ಅಲಿಯಾಸ್ ಪಪ್ಪು ಮತ್ತು ಹರ್ಷ ಅಲಿಯಾಸ್ ಸುಧಾಕರ್ ಎಂಬ ಮೂವರು ವ್ಯಕ್ತಿಗಳು ಬಂದಿದ್ದಾರೆ. ಆಕಾಶ್ ಮತ್ತು ಹರ್ಷ ಆಕೆಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ; ಹರ್ಷ ದಾರಿಯಲ್ಲೇ ಇಳಿದುಕೊಂಡರೆ, ಆಕಾಶ್ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ನಂತರ ಬೆಂಗಳೂರಿಗೆ ಮರಳಲು ₹2,000 ನೀಡಿದ್ದಾನೆ.

ಆ ಮಹಿಳೆ ಬೆಂಗಳೂರಿಗೆ ತಲುಪಿದ ನಂತರವೂ ಆಕೆಯ ಸಂಕಷ್ಟ ಮುಂದುವರಿಯಿತು; ಬಳಿಕ ಆಕಾಶ್ ಕಲಬುರಗಿಗೆ ಮರಳಿದರೆ ಉದ್ಯೋಗ ಮತ್ತು ವಿವಾಹದ ಭರವಸೆ ನೀಡಿದ್ದಾನೆ. ಕಲಬುರಗಿಗೆ ಮರಳಿದ ನಂತರ, ಪೊಲೀಸರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಹೇಳಿ ಆಕಾಶ್ ಆಕೆಯನ್ನು ಎರಡು ದಿನಗಳ ಕಾಲ ಒಂದು ಕೋಣೆಯಲ್ಲಿ ಕೂಡಿಹಾಕಿ, ಪದೇ ಪದೆ ದೌರ್ಜನ್ಯ ಎಸಗಿ, ಬಳಿಕ ರೈಲು ನಿಲ್ದಾಣದಲ್ಲಿ ಬಿಟ್ಟುಹೋಗಿದ್ದಾನೆ. ಬಳಿಕ ಹರ್ಷ ಆಕೆಯನ್ನು ಸಂಪರ್ಕಿಸಿ ಆಶ್ರಯ ಹಾಗೂ ಮನೆಗೆಲಸ ಮಾಡುವ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಬಳಿಕ ಆತ ಆಕೆಯನ್ನು ಆಳಂದ ತಾಲೂಕಿನ ಗ್ರಾಮವೊಂದರಲ್ಲಿರುವ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಹಾಗೂ ನಂತರ ಆಧಾರ್ ಕಾರ್ಡ್ ಮಾಡಿಸಿಕೊಡುವ ನೆಪದಲ್ಲಿ ಆಳಂದದ ಲಾಡ್ಜ್‌ವೊಂದಕ್ಕೆ ಕರೆದೊಯ್ದು ಮತ್ತೆ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದನೆಂದು ಆರೋಪಿಸಲಾಗಿದೆ.

ಆಳಂದದಿಂದ ಹೊರಬಂದ ಸಂತ್ರಸ್ತೆ ನಂತರ ಶಹಾಪುರಕ್ಕೆ ಬಸ್ ಹತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ಅಳುತ್ತಿರುವುದನ್ನು ಗಮನಿಸಿದ ಸಹ-ಪ್ರಯಾಣಿಕರೊಬ್ಬರು ತಕ್ಷಣವೇ ತುರ್ತು ಪೊಲೀಸ್ ಸಹಾಯವಾಣಿ '112'ಕ್ಕೆ ಮಾಹಿತಿ ನೀಡಿದ್ದಾರೆ.

ತುರ್ತು ಸೇವಾ ಸಿಬ್ಬಂದಿ ಬಸ್ಸನ್ನು ತಡೆದು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ ಮತ್ತು ಯಾದಗಿರಿಯಲ್ಲಿರುವ ಸರ್ಕಾರಿ ಮಹಿಳಾ ಆಶ್ರಯ ತಾಣವಾದ 'ಶಕ್ತಿ ಸದನ'ಕ್ಕೆ ಕರೆದೊಯ್ದಿದ್ದಾರೆ. ಆಶ್ರಯ ತಾಣದ ಅಧಿಕಾರಿಗಳಿಂದ ಸಮಾಲೋಚನೆ ಪಡೆದ ನಂತರ, ಆಕೆ ನಡೆದ ಘಟನೆಗಳನ್ನು ವಿವರಿಸಿದ್ದಾರೆ ಮತ್ತು ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಸಮಗ್ರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ತಂಡಗಳನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com