

ಬೆಂಗಳೂರು: ಜೆ.ಪಿ.ನಗರದ ನಾರಾಯಣ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ವೊಬ್ಬರ ಮೇಲೆ ಅವರ ಪತಿಯೇ ಆಸ್ಪತ್ರೆಯ ನೆಲಮಾಳಿಗೆಯ ಪಾರ್ಕಿಂಗ್ ಪ್ರದೇಶದಲ್ಲಿ ಹೊಂಚು ಹಾಕಿ ದಾಳಿ ನಡೆಸಿದ್ದು, ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿ, ಆ್ಯಸಿಡ್‌ನಂತಹ ಶಂಕಿತ ದ್ರವವನ್ನು ಎರಚಿ ಪಾಪಕೃತ್ಯ ಮೆರೆದ ಘಟನೆ ನಡೆದಿದೆ. ಘಟನೆಯಲ್ಲಿ ನರ್ಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ದಕ್ಷಿಣ ವಿಭಾಗದ ಡಿಸಿಪಿ ಕೆ. ವಂಶಿಕೃಷ್ಣ, ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗೆ 9ರಿಂದ 9.15ರ ನಡುವೆ ಈ ಘಟನೆ ನಡೆದಿದೆ.
ಗಾಯಗೊಂಡಿರುವ ನರ್ಸ್‌ರನ್ನು ಪಶ್ಚಿಮ ಬಂಗಾಳ ಮೂಲದ ಮಧುಮಿತಾ ಎಂದು ಗುರುತಿಸಲಾಗಿದೆ. ಮಧುಮಿತಾ ಅವರು ಆರೋಪಿಯಾಗಿರುವ ವೆಂಕಟೇಶ್‌ನನ್ನು ಡೇಟಿಂಗ್ ಆ್ಯಪ್ ಮೂಲಕ ಪರಿಚಯಿಸಿಕೊಂಡಿದ್ದರು. ಬಳಿಕ 2024ರಲ್ಲಿ ಮಧುರೈನಲ್ಲಿ ಇಬ್ಬರೂ ವಿವಾಹವಾಗಿದ್ದರು. ಚೆನ್ನೈ ಮೂಲದ ತೈಲ ಮತ್ತು ಅನಿಲ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ವೆಂಕಟೇಶ್, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾದ ಹಿನ್ನೆಲೆಯಲ್ಲಿ ದಾಳಿ ನಡೆದ ಹಿಂದಿನ ದಿನ ಮಧುರೈನಿಂದ ಬೈಕ್‌ನಲ್ಲಿ 400 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸಿ ಬೆಂಗಳೂರಿಗೆ ಬಂದಿದ್ದನು ಎನ್ನಲಾಗಿದೆ.
ಕಳೆದ ಒಂದು ವರ್ಷದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವೆಂಕಟೇಶ್ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಮಧುಮಿತಾ ಅವರನ್ನು ಅಡ್ಡಗಟ್ಟಿ, ಎರಡು ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಅವರ ಮೇಲೆ ರಾಸಾಯನಿಕ ದ್ರವವನ್ನು ಎರಚಿದ್ದಾನೆ ಎಂದು ಡಿಸಿಪಿ ಕೆ. ವಂಶಿಕೃಷ್ಣ ತಿಳಿಸಿದ್ದಾರೆ.
ಘಟನೆಯನ್ನು ಕಂಡ ದಾರಿಹೋಕರು ಹಾಗೂ ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಲು ಯತ್ನಿಸಿದ್ದಾರೆ. ಬಳಿಕ ಕರ್ತವ್ಯದಲ್ಲಿದ್ದ ಸಂಚಾರ ವಿಭಾಗದ ಸಬ್‌ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ದಾಳಿಕೋರನನ್ನು ವಶಕ್ಕೆ ಪಡೆದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮಧುಮಿತಾ ಅವರನ್ನು ತಕ್ಷಣವೇ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಅಪರಾಧ ಸ್ಥಳ ಪರಿಶೀಲನಾ ತಂಡ (SOCO) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಸಲಾಗಿರುವ ದ್ರವದ ಮಾದರಿಗಳನ್ನು ಸಂಗ್ರಹಿಸಿದೆ. ಅದು ಕೈಗಾರಿಕಾ ದರ್ಜೆಯ ರಾಸಾಯನಿಕವೇ ಅಥವಾ ಮನೆಯ ಬಳಕೆಯ ಆ್ಯಸಿಡ್ ಆಗಿದೆಯೇ ಎಂಬುದನ್ನು ಪತ್ತೆಹಚ್ಚಲು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ಮುಂದುವರಿದಿದೆ.