8.7 ಕೋಟಿ ರೂ. ಸಾರ್ವಜನಿಕ ಹಣ ನೀರು ಪಾಲು: ಸಂಪರ್ಕ ರಸ್ತೆಯೇ ಇಲ್ಲದೆ ಅನಾಥವಾಗಿ ನಿಂತಿದೆ ಕಾರವಾರ ಹೆದ್ದಾರಿ ಸೇತುವೆ, ಸರ್ಕಾರದ ಯಡವಟ್ಟು ಎತ್ತಿ ತೋರಿಸಿದ CAG..!

2024ರ ಮಾರ್ಚ್‌ಗೆ ಅಂತ್ಯಗೊಂಡ ವರ್ಷದ ಸಿಎಜಿ ಅನುಸರಣೆ ಲೆಕ್ಕಪರಿಶೋಧನಾ ವರದಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಹಾಗೂ ಸೇತುವೆ ಕಾಮಗಾರಿಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಹಲವು ಲೋಪಗಳನ್ನು ಎತ್ತಿ ತೋರಿಸಲಾಗಿದೆ.
AI image
ಎಐ ಸೃಷ್ಟಿತ ಚಿತ್ರ
Updated on

ಬೆಂಗಳೂರು: ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಅವೈಜ್ಞಾನಿಕ ಯೋಜನೆಗೆ ಸಾಕ್ಷಿಯೆಂಬಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪ ಬರೋಬ್ಬರಿ 8.7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆಯೊಂದು ಸಾರ್ವಜನಿಕ ಬಳಕೆಗೆ ಸಿಗದೆ ಸಂಪೂರ್ಣ ನಿರುಪಯುಕ್ತವಾಗಿ ಬಿದ್ದಿದೆ.

ಸೇತುವೆ ನಿರ್ಮಾಣವಾಗಿ ವರ್ಷಗಳು ಕಳೆದರೂ ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೇ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಗಂಭೀರ ಯೋಜನಾ ವೈಫಲ್ಯವನ್ನು ಇತ್ತೀಚಿನ ಮಹಾಲೆಕ್ಕಪಾಲರ (CAG) ವರದಿಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿದೆ.

ಸಿದ್ದರನ್ಯಾಯವಾಡ ಗ್ರಾಮವನ್ನು ಉಂಬಲ್ಜೂಗ್ ಗ್ರಾಮಕ್ಕೆ ಸಂಪರ್ಕಿಸುವ ಉದ್ದೇಶದಿಂದ ನಿರ್ಮಿಸಲಾದ ಈ ಸೇತುವೆ 2022ರ ಜನವರಿಯಲ್ಲಿ ಪೂರ್ಣಗೊಂಡಿದ್ದರೂ, ಸೇತುವೆಗೆ ಹೋಗಲು ಅಥವಾ ಅಲ್ಲಿಂದ ಮುಖ್ಯ ರಸ್ತೆಯನ್ನು ಸಂಪರ್ಕಿಸಲು ಸಂಪರ್ಕ ರಸ್ತೆಗಳೇ ನಿರ್ಮಾಣವಾಗಿಲ್ಲ. ಹೀಗಾಗಿ ಸೇತುವೆ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಭಾರತದ ಲೆಕ್ಕಪರಿಶೋಧಕ ಮತ್ತು ಮಹಾಲೆಕ್ಕಪರಿಶೋಧಕರ ವರದಿ ತಿಳಿಸಿದೆ.

2024ರ ಮಾರ್ಚ್‌ಗೆ ಅಂತ್ಯಗೊಂಡ ವರ್ಷದ ಸಿಎಜಿ ಅನುಸರಣೆ ಲೆಕ್ಕಪರಿಶೋಧನಾ ವರದಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಹಾಗೂ ಸೇತುವೆ ಕಾಮಗಾರಿಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಹಲವು ಲೋಪಗಳನ್ನು ಎತ್ತಿ ತೋರಿಸಲಾಗಿದೆ.

ಯೋಜನೆಗಳ ವೆಚ್ಚ ಅಂದಾಜುಗಳನ್ನು ಹೆಚ್ಚಾಗಿ ನಿಗದಿಪಡಿಸಿರುವುದು ಹಾಗೂ ಈಗಾಗಲೇ ಲಭ್ಯವಿದ್ದ ನಿರ್ಮಾಣ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿರುವುದರಿಂದ ಸಾರ್ವಜನಿಕ ಹಣದ ಮೇಲೆ ಹೆಚ್ಚುವರಿ ಹೊರೆ ಬಿದ್ದಿರುವುದನ್ನು ವರದಿ ಉಲ್ಲೇಖಿಸಿದೆ.

ಯೋಜನೆಗಳ ಅಂದಾಜು ಸಿದ್ಧಪಡಿಸುವಾಗ ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣಾ ಕೇಂದ್ರದ ಮೂಲಕ ಸಮರ್ಪಕ ರಸ್ತೆ ಯೋಜನೆ ರೂಪಿಸುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಲೆಕ್ಕಪರಿಶೋಧಕರು ಹೇಳಿದ್ದಾರೆ.

ಕಾಮಗಾರಿಗಳಲ್ಲಿ ಈಗಾಗಲೇ ಲಭ್ಯವಿದ್ದ ಅಗೆದ ಮಣ್ಣು, ವೆಟ್ ಮಿಕ್ಸ್ ಮಕಾಡಂ ಹಾಗೂ ಗ್ರ್ಯಾನ್ಯುಲರ್ ಸಬ್-ಬೇಸ್‌ನಂತಹ ಸಾಮಗ್ರಿಗಳನ್ನು ಮರುಬಳಕೆ ಮಾಡುವ ಮೂಲಕ ವೆಚ್ಚ ಕಡಿಮೆ ಮಾಡುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳಲಾಗಿಲ್ಲ ಎಂದು ವರದಿ ತಿಳಿಸಿದೆ.

AI image
ನಿರ್ಲಕ್ಷ್ಯದಿಂದ ಕರ್ನಾಟಕದ ಸ್ಮಾರ್ಟ್ ರಸ್ತೆ ಯೋಜನೆಗಳು ವಿಫಲ: ಸಿಎಜಿ ವರದಿ

ರಸ್ತೆ ಕಾಮಗಾರಿಗಳಲ್ಲಿನ ಮಣ್ಣಿನ ತುಂಬುವಿಕೆಯ ಪ್ರಮಾಣದ ತಪ್ಪಾದ ಲೆಕ್ಕಾಚಾರ, ಟೆಂಡರ್‌ಗಳಲ್ಲಿ ಹೆಚ್ಚಿನ ಹೆಚ್ಚುವರಿ ದರ, ಭಾರತೀಯ ರಸ್ತೆ ಕಾಂಗ್ರೆಸ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವಿನ್ಯಾಸ ಮಾನದಂಡಗಳಿಂದ ವಿಚಲನ ಸೇರಿದಂತೆ ಹಲವು ಅಂಶಗಳು ವೆಚ್ಚ ಏರಿಕೆಗೆ ಕಾರಣವಾಗಿವೆ.

ದರಪಟ್ಟಿಯಲ್ಲಿನ ತಪ್ಪು ಪರಿವರ್ತನಾ ಅಂಶಗಳೂ ಅಂದಾಜು ವೆಚ್ಚವನ್ನು ಹೆಚ್ಚಿಸಿವೆ. ಇದರಿಂದ ಸಾರ್ವಜನಿಕರ ಹಣದ ವೆಚ್ಚದಲ್ಲಿ ಗುತ್ತಿಗೆದಾರರಿಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಸಿಮೆಂಟ್ ಸಂಸ್ಕರಿತ ಸಬ್-ಬೇಸ್, ಮರುಪಡೆಯಲಾದ ಡಾಂಬರು ಹಾಗೂ ಪ್ಲಾಸ್ಟಿಕ್ ಆಧಾರಿತ ಡಾಂಬರು ರಸ್ತೆ ಸೇರಿದಂತೆ ಕಡಿಮೆ ವೆಚ್ಚದ ಪರ್ಯಾಯ ವಿಧಾನಗಳನ್ನೂ ಇಲಾಖೆ ಪರಿಶೀಲಿಸಿಲ್ಲ.

ಕಾರವಾರದ ಬಳಿಯ ಸೇತುವೆ ಕಾಮಗಾರಿಯನ್ನು ‘ಸಂಪರ್ಕವಿಲ್ಲದ ಯೋಜನೆ’ಗೆ ಉದಾಹರಣೆಯಾಗಿ ವರದಿ ಉಲ್ಲೇಖಿಸಿದೆ. 8.7 ಕೋಟಿ ರೂ. ಖರ್ಚು ಮಾಡಿದರೂ ಸಂಪರ್ಕ ರಸ್ತೆಗಳು ನಿರ್ಮಾಣವಾಗದ ಕಾರಣ ಸೇತುವೆ ಬಳಕೆಗೆ ಬಂದಿಲ್ಲ. ಸೇತುವೆಗೆ ಸಂಪರ್ಕ ಕಲ್ಪಿಸಬೇಕಿದ್ದ ರಸ್ತೆಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆಯೇ ಲೆಕ್ಕಪರಿಶೋಧನೆ ನಡೆದ ಸಮಯದಲ್ಲಿ ಆರಂಭವಾಗಿರಲಿಲ್ಲ. ಸೇತುವೆ ನಿರ್ಮಾಣಕ್ಕೂ ಮುನ್ನ ಅದಕ್ಕೆ ಅಗತ್ಯವಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಕಾಮಗಾರಿ ಕೈಗೊಂಡಿರುವುದರಿಂದ ಈ ವೆಚ್ಚ ‘ಫಲಪ್ರದವಾಗದ ವೆಚ್ಚ’ವಾಗಿದೆ ಎಂದು ಹೇಳಿದೆ.

ಆದರೆ, ಆರಂಭಿಕ ಸಮೀಕ್ಷೆಯ ಸಂದರ್ಭದಲ್ಲಿ ಭೂಮಾಲೀಕರು ಯೋಜನೆಗೆ ಒಪ್ಪಿಗೆ ನೀಡಿದ್ದರು ಮತ್ತು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿತ್ತು ಎಂದು ಇಲಾಖೆ ಲೆಕ್ಕಪರಿಶೋಧಕರಿಗೆ ತಿಳಿಸಿದೆ.

ಭೂಸ್ವಾಧೀನ ಪೂರ್ಣಗೊಂಡ ಬಳಿಕ ಸಂಪರ್ಕ ರಸ್ತೆ ನಿರ್ಮಾಣ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿತ್ತು. ಇದನ್ನು ಗಮನಿಸಿದ ಸಿಎಜಿ, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಇಲಾಖೆಗೆ ಸರ್ಕಾರ ಸೂಚಿಸಬೇಕು ಹಾಗೂ ಮುಂದಿನ ಯೋಜನೆಗಳಲ್ಲಿ ಕಾಮಗಾರಿ ಆರಂಭಿಸುವ ಮುನ್ನ ಅಗತ್ಯ ಭೂಮಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.

ಮತ್ತೊಂದು ಪ್ರಕರಣದಲ್ಲಿ ಎಂಎಂ ಹಿಲ್ಸ್‌ನಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನದ ಹಿಂದೆ ಕ್ಯೂ ಸಂಕೀರ್ಣದ ನಿರ್ಮಾಣವನ್ನೂ ಸಿಎಜಿ ಪ್ರಶ್ನಿಸಿದೆ. 2021ರ ಏಪ್ರಿಲ್‌ನಲ್ಲಿ ರೂ.18.7 ಕೋಟಿ ವೆಚ್ಚದಲ್ಲಿ ದಾಮೋದರ್ ರಾಜು ಅವರಿಗೆ ಕಾಮಗಾರಿ ವಹಿಸಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಳಿಸಬೇಕಾದ ಅವಧಿಯನ್ನು ಒಪ್ಪಂದದಲ್ಲಿ ನಮೂದಿಸಿಲ್ಲ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com