

ಬಾಗಲಕೋಟೆ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಹೆಡ್ ವಾರ್ಡರ್, ಕ್ಷುಲ್ಲಕ ಕಾರಣಕ್ಕೆ ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗದ್ದನಕೇರಿ ಕ್ರಾಸ್ ಬಳಿಯ ಡಾಬಾ ಮಾಲೀಕರೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮೃತ ಡಾಬಾ ಮಾಲೀಕರನ್ನು ಮೆಹಬೂಬಸಾಬ್ ಪಟ್ಟೆವಾಲೆ(58) ಎಂದು ಗುರುತಿಸಲಾಗಿದೆ.
ರಜೆ ಮೇಲೆ ಊರಿಗೆ ಬಂದಿದ್ದ ಪರಪ್ಪನ ಅಗ್ರಹಾರ ಜೈಲು ವಾರ್ಡರ್ ಅಡಿವೆಪ್ಪ ಅವರು ಸೆಪ್ಟೆಂಬರ್ 17 ರಂದು ರಾತ್ರಿ ಮೆಹಬೂಬಸಾಬ್ ಅವರ ಡಾಬಾಗೆ ಬಂದು ಊಟ ಕೇಳಿದ್ದಾರೆ. ಈ ವೇಳೆ ಊಟ ಖಾಲಿಯಾಗಿದೆ ಎಂದಿದ್ದಕ್ಕೆ ಜಗಳ ತೆಗೆದಿದ್ದ ವಾರ್ಡರ್, ಡಾಬಾ ಮಾಲೀಕರ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು.
ಹಲ್ಲೆಯಿಂದ ಗಾಯಗೊಂಡ ಮೆಹಬೂಬ್ ಸಾಬ್ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣವೇ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ. ಈ ಗಲಾಟೆಯಲ್ಲಿ ಹೆಡ್ ವಾರ್ಡರ್ ಅಡಿವೆಪ್ಪ ಅವರ ತಲೆಗೂ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಲಾದಗಿ ಠಾಣೆ ಪೊಲೀಸರು, ಆರೋಪಿ ಅಡಿವೆಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.