

ಬೆಂಗಳೂರು: ಕೇಂದ್ರ ಸರ್ಕಾರದ ಮೇರಾ ರೇಷನ್ ಮೊಬೈಲ್ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಮಾಡಲಾಗುವ ರೇಷನ್ ಕಾರ್ಡ್ ಇ-ಕೆವೈಸಿ ಕರ್ನಾಟಕ ರಾಜ್ಯದಲ್ಲಿ ಅಧಿಕೃತವಾಗಿ ಮಾನ್ಯವಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಮಾಹಿತಿಯನ್ನು ನಂಬಿ ಸಾರ್ವಜನಿಕರು ಗೊಂದಲಕ್ಕೀಡಾಗಬಾರದು ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಹಾಗಾದ್ರೆ, ಈ ಗೊಂದಲಕ್ಕೆ ಕಾರಣವೇನು?
ಇ-ಕೆವೈಸಿಗಾಗಿ, ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲುವುದನ್ನು ಹಾಗೂ ಸರ್ವರ್ ಸಮಸ್ಯೆಯನ್ನು ತಪ್ಪಿಸಿಕೊಳ್ಳಲು ಜನರು ಸಾಮಾಜಿಕ ಜಾಲತಾಣಗಳಲ್ಲಿನ ವಿಡಿಯೋಗಳನ್ನು ನೋಡಿ, ಕೇಂದ್ರ ಸರ್ಕಾರದ ಮೇರಾ ರೇಷನ್ ಅಥವಾ Mera eKYC ಮೊಬೈಲ್ ಆ್ಯಪ್‌ಗಳ ಮೂಲಕ ಮುಖ ಗುರುತಿಸುವಿಕೆ ಬಳಸಿ ಮನೆಯಲ್ಲೇ ಇ-ಕೆವೈಸಿ ಮಾಡಿಕೊಳ್ಳಲು ಆರಂಭಿಸಿದ್ದರು. ಆದರೆ, ಮೇರಾ ರೇಷನ್ ಕೇಂದ್ರ ಸರ್ಕಾರದ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆಯಡಿ ಬರುವ ಆ್ಯಪ್ ಆಗಿದ್ದು, ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಪಡಿತರ ತಂತ್ರಾಂಶ ಮತ್ತು ಈ ಆ್ಯಪ್‌ನ ಸರ್ವರ್‌ಗಳ ನಡುವೆ ಡೇಟಾ ಲಿಂಕ್ ಇಲ್ಲ. ಹಾಗಾಗಿ, ಈ ಆ್ಯಪ್‌ನಲ್ಲಿ ಕೆವೈಸಿ ಮಾಡಿದರೂ ಅದು ರಾಜ್ಯ ಸರ್ಕಾರದ ದಾಖಲೆಗಳಲ್ಲಿ ನವೀಕರಣಗೊಳ್ಳುತ್ತಿರಲಿಲ್ಲ. ಹಾಗಾಗಿ, ಆಹಾರ ಇಲಾಖೆಯ ಉಪ ನಿರ್ದೇಶಕರಾದ ಕೆ.ಪಿ. ಮಧುಸೂದನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಮಾಹಿತಿಯನ್ನು ನಂಬಿ ಸಾರ್ವಜನಿಕರು ಗೊಂದಲಕ್ಕೀಡಾಗಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರೆದು, ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ಕಡ್ಡಾಯವಾಗಿ ತಮ್ಮ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಪೋಸ್ ಯಂತ್ರದ ಮೂಲಕ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ತಿಳಿಸಿದೆ. ಇದೇ ವೇಳೆ, ನ್ಯಾಯಬೆಲೆ ಅಂಗಡಿಗಳಲ್ಲಿನ ದಟ್ಟಣೆ ಹಾಗೂ ಸರ್ವರ್ ಸಮಸ್ಯೆಯನ್ನು ತಪ್ಪಿಸಲು ಆಹಾರ ಇಲಾಖೆಯು ಪ್ರತ್ಯೇಕ ಅಧಿಕೃತ ಆಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸುತ್ತಿದೆ. ಅದು ಅಧಿಕೃತವಾಗಿ ಬಿಡುಗಡೆಯಾಗುವವರೆಗೂ ಯಾವುದೇ ಮೂರನೇ ವ್ಯಕ್ತಿಯ ಆ್ಯಪ್‌ಗಳನ್ನು ಬಳಸದಂತೆ ಸೂಚಿಸಲಾಗಿದೆ.
ಗಡುವು ವಿಸ್ತರಣೆ...
ರಾಜ್ಯಾದ್ಯಂತ ಎದುರಾಗಿದ್ದ ಸರ್ವರ್ ಸಮಸ್ಯೆಯ ಹಿನ್ನೆಲೆಯಲ್ಲಿ ಆಹಾರ ಇಲಾಖೆಯು ಇ-ಕೆವೈಸಿ ಮಾಡಿಸಲು ಇದ್ದ ಕೊನೆಯ ದಿನಾಂಕವನ್ನು ಅಕ್ಟೋಬರ್ 20 ರವರೆಗೆ ವಿಸ್ತರಿಸಿದೆ.
ಏತನ್ಮಧ್ಯೆ, ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ahara.karnataka.gov.in ಗೆ ಭೇಟಿ ನೀಡಿ, 'ಇ-ಸೇವೆಗಳು' ವಿಭಾಗದ 'e-Status' ಲಿಂಕ್ ಅಡಿಯಲ್ಲಿ ಪರಿಶೀಲಿಸಬಹುದು. ಅಲ್ಲಿ Done/Completed ಎಂದು ತೋರಿಸಿದರೆ ಮಾತ್ರ ನಿಮ್ಮ ಕೆವೈಸಿ ಯಶಸ್ವಿಯಾಗಿದೆ ಎಂದರ್ಥ