ದೋಷ ಮುಕ್ತರಾಗಿ ಬನ್ನಿ: ವಿಜೇಂದರ್ಗೆ ಐಎಬಿಎಫ್ ಸೂಚನೆ

ನವದೆಹಲಿ: ವಿವಾದಕ್ಕೆ ಸಿಲುಕಿರುವ ವಿಜೇಂದರ್ ಸಿಂಗ್ ಅವರು ದೋಷ ಮುಕ್ತರಾಗಿ ಬಂದ ನಂತರವೇ ಮುಂದಿನ ಬಾಕ್ಸಿಂಗ್ ಸರಣಿಗಳಲ್ಲಿ ಪಾಲ್ಗೊಳ್ಳಬೇಕು ಎಂದು ಭಾರತೀಯ ಬಾಕ್ಸಿಂಗ್ ಫೆಡರೇಷನ್(ಐಎಬಿಎಫ್)ನ ಅಧ್ಯಕ್ಷ ಅಭಿಷೇಕ್ ಮಟೋರಿಯಾ ಸೂಚನೆ ನೀಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ವಿವಾದದಲ್ಲಿ ಸಿಲುಕಿರುವ ವಿಜೇಂದರ್ ಸಿಂಗ್ ಅವರು ಮೊದಲು ತಮ್ಮ ರಕ್ತ ಮತ್ತು ತಲೆಕೂದಲಿನ ಮಾದರಿಯನ್ನು ಪರೀಕ್ಷೆಗೆ ನೀಡಬೇಕು. ಪರೀಕ್ಷೆಯಲ್ಲಿ ತಾವು ದೋಷಮುಕ್ತರಾದ ನಂತರವೇ ಅವರು ಮುಂದಿನ ಬಾಕ್ಸಿಂಗ್ ಸರಣಿಯಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.
'ನಾನು ಇತ್ತೀಚೆಗಷ್ಟೇ ವಿಜೇಂದರ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದೆ. ಹೋಳಿ ಹಬ್ಬದ ಸಂದರ್ಭದಲ್ಲಿಯೂ ನಾನು ಮತ್ತು ವಿಜೇಂದರ್ ಸಿಂಗ್ ಪರಸ್ಪರ ಶುಭಾಷಯ ಹಂಚಿಕೊಂಡಿದ್ದೆವು. ವಿವಾದಕ್ಕೆ ಸಂಬಂಧಿಸಿದಂತೆ ವಿಜೇಂದರ್, ತಾವು ದೋಷಮುಕ್ತ ಎಂಬುದನ್ನು ಸಾಬೀತುಪಡಿಸಬೇಕು. ಇದಕ್ಕಾಗಿ ಅವರು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ(ನಾಡಾ)ದ ಮುಂದೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಹೇಳಿದರು.
ವಿಜೇಂದರ್ ಸಂಪರ್ಕಕ್ಕೆ ಸಿಗುತ್ತಿಲ್ಲ: ನಾಡಾ
ಈ ಹಿಂದೆ ವಿಜೇಂದರ್ ಸಿಂಗ್ ಅವರನ್ನು ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದಿರುವ ನಾಡಾ ಅಧಿಕಾರಿಗಳು, ಇದೀಗ ಅವರು ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ ನಿರ್ದೇಶಕ ಮುಕುಲ್ ಚಟರ್ಜಿ ಅವರು, ನಾಡಾ ಉದ್ದೀಪನ ಮದ್ದು ಪರೀಕ್ಷೆಗೆ ಸಿದ್ದವಾಗಿದೆ. ಅಂತಾರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ವಿಧಿಸಿರುವ ನಿಯಮಾವಳಿಗಳ ಅನುಸಾರ ನಾವು ಪರೀಕ್ಷೆಗೊಳಪಡಿಸುತ್ತೇವೆ. ಆದರೆ ವಿಜೇಂದರ್ ಸಿಂಗ್ ಅವರು ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಹೀಗಿರುವಾಗ ಪರೀಕ್ಷೆ ನಡೆಸಲು ಹೇಗೆ ಸಾಧ್ಯ. ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ಪರೀಕ್ಷೆ ನಡೆಸಲು ನಾಡಾ ಹಿಂದೇಟು ಹಾಕುತ್ತಿದ್ದಂತೆ, ಇತ್ತ ಸ್ವತಃ ಕ್ರೀಡಾ ಪ್ರಾಧಿಕಾರವೇ ವಿಜೇಂದರ್ ಸಿಂಗ್ ಅವರನ್ನು ಪರೀಕ್ಷೆಗೊಳಪಡಿಸಲು ಮುಂದಾಗಿದೆ.
ಒಟ್ಟಾರೆ ಬಹುಕೋಟಿ ಮೌಲ್ಯದ ಮಾದಕ ವಸ್ತು ಪತ್ತೆ ಪ್ರಕರಣ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಸ್ವತಃ ಪಂಜಾಬ್ ಪೊಲೀಸರೇ ಮಾದಕ ವಸ್ತು ಸೇವಿಸಿರುವ ಬಗ್ಗೆ ವಿಜೇಂದರ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದು ಪ್ರಕರಣಕ್ಕೆ ಮತ್ತಷ್ಟು ರೋಚಕತೆಯನ್ನು ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


