100 ಕೋಟಿ ಪರಿಹಾರ ನೀಡಿ: 'ಸ್ಟರ್ ಲೈಟ್'ಗೆ ಸುಪ್ರೀಂ ಆದೇಶ

ನವದೆಹಲಿ: ಲಂಡನ್ ಮೂಲದ ಬಹುರಾಷ್ಟ್ರೀಯ ಸಂಸ್ಥೆ 'ಸ್ಟರ್ ಲೈಟ್' 100 ಕೋಟಿ ರುಪಾಯಿ ಪರಿಹಾರವಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿದೆ.
ಲಂಡನ್ ಮೂಲದ ವೇದಾಂತ ಸಮೂಹದ ಸಂಸ್ಥೆಯಾಗಿರುವ 'ಸ್ಟರ್ ಲೈಟ್' ತಮಿಳುನಾಡಿನಲ್ಲಿ ತಾಮ್ರೋತ್ಪನ್ನ ಘಟಕ ಹೊಂದಿದ್ದು, ಈ ಘಟಕದ ತ್ಯಾಜ್ಯವು ಪರಿಸರಕ್ಕೆ ಸೇರಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರಿನ ವಿಚಾರಣೆ ನಡೆಸಿದ ನ್ಯಾ. ಎ.ಕೆ ಪಟ್ನಾಯಕ್ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಸ್ಟರ್ ಲೈಟ್ ಸಂಸ್ಥೆಗೆ 100 ಕೋಟಿ ರುಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.
'ನಿಮ್ಮ ಕಾರ್ಖಾನೆಯಿಂದಾಗಿ ಸುತ್ತಮುತ್ತಲಿನ ಪರಿಸರ ಹಾಳಾಗಿದ್ದು, ಇದಕ್ಕೆ ಪರಿಹಾರವಾಗಿ ನೀವು ದಂಡ ತೆರಬೇಕಿದೆ. ಪರಿಹಾರ ಧನವನ್ನು ನ್ಯಾಯಾಲಯ ಈಗಲೇ ನಿರ್ಧರಿಸುವುದಿಲ್ಲ. ಬದಲಿಗೆ ಸಂಸ್ಥೆಯ ಆರ್ಥಿಕ ಸಾಮರ್ಥ್ಯವನ್ನು ಅವಲೋಕಿಸಿದ ನಂತರ ನಿರ್ಧಾರ ಮಾಡುತ್ತದೆ. ಆದರೆ ಪರಿಹಾರ ಧನವನ್ನು 100 ಕೋಟಿಗಿಂತಲೂ ಕಡಿಮೆ ವಿಧಿಸಿದರೆ ಅದರಿಂದ ಪರಿಣಾಮವೇನೂ ಆಗುವುದಿಲ್ಲ' ಎಂದು ನ್ಯಾ. ಎ.ಕೆ.ಪಟ್ನಾಯಕ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಈ ಪರಿಹಾರ ಧನವನ್ನು ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಅಂತೆಯೇ ಸಂಸ್ಥೆಯನ್ನು ಮುಚ್ಚುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ತಡೆ ಹಿಡಿದಿರುವ ನ್ಯಾಯಾಲಯ, ಸಂಸ್ಥೆಯನ್ನು ಮುಚ್ಚುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ವಿದೇಶಿ ಮೂಲದ ಬಹುರಾಷ್ಟ್ರೀಯ ಸಂಸ್ಥೆಯಾಗಿರುವ ಸ್ಟರ್ಲೈಟ್ ಸಂಸ್ಥೆ, ತಮಿಳುನಾಡಿನಲ್ಲಿ ತಾಮ್ರದ ಕಾರ್ಖಾನೆಯನ್ನು ಸ್ಥಾಪಿಸಿತ್ತು. ಕಾರ್ಖಾನೆಯಿಂದ ಹೊರಹೊಗುತ್ತಿರುವ ತ್ಯಾಜ್ಯ ಪರಿಸರ ಮಾಲಿನ್ಯ ಮಾಡುತ್ತಿದೆ ಎಂದು ಆರೋಪಿಸಿ ಪರಿಸರ ತಜ್ಞರು 2010ರಲ್ಲಿ ಮದ್ರಾಸ್ ಹೈಕೋರ್ಟಿನಲ್ಲಿ ದೂರು ಸಲ್ಲಿಸಿದ್ದರು. ದೂರನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿ ಸಂಸ್ಥೆಯನ್ನು ಮುಚ್ಚುವಂತೆ ಆದೇಶ ನೀಡಿತ್ತು.
ಮದ್ರಾಸ್ ಹೈಕೋರ್ಟ್ನ ಆದೇಶವನ್ನು ರದ್ದುಗೊಳಿಸುವಂತೆ ಕೋರಿ 'ಸ್ಟರ್ ಲೈಟ್' ಸಂಸ್ಥೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


