ಅತ್ಯಾಚಾರ ತಡೆ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ

ನವದೆಹಲಿ: ಅತ್ಯಾಚಾರ ತಡೆ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದು, ರಾಷ್ಟ್ರಪತಿ ಭವನ ಇಂದು ಮಸೂದೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಅತ್ಯಾಚಾರ ತಡೆ ಮಸೂದೆ ಕೊನೆಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಿನ್ನೆ ಅಂಕಿತ ಹಾಕಿದ್ದು, ಇಂದು ಅದರ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಹಲವು ಮಾರ್ಪಾಟುಗಳು ಮತ್ತು ತಿದ್ದುಪಡಿಗಳೊಂದಿಗೆ ನೂತನ ಕಾಯ್ದೆಯು ಕೊನೆಗೂ ಅಧಿಕೃತವಾಗಿ ಕಾನೂನಿನ ಮಾನ್ಯತೆ ಪಡೆದಿದೆ.
ಈ ನೂತನ ಕಾನೂನಿನ ಅನ್ವಯ ಭಾರತೀಯ ದಂಡ ಸಂಹಿತೆ(ಐಪಿಸಿ)ಗೆ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ಇದರ ಅನ್ವಯ ಅತ್ಯಾಚಾರಿಗಳಿಗೆ ದಂಡ ಸಮೇತ 20 ವರ್ಷ ಸೆರೆವಾಸ, ಆಜೀವ ಪರ್ಯಂತ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ನೀಡುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಅಂತೆಯೇ ಮಕ್ಕಳ ಮೇಲಿನ ದೌರ್ಜನ್ಯದ ಕುರಿತ ಕಾನೂನುಗಳಿಗೂ ಮಹತ್ವದ ಬದಲಾವಣೆ ಮಾಡಲಾಗಿದೆ.
ಯುವತಿಯರನ್ನು ಹಿಂಬಾಲಿಸುವಿಕೆ, ಅಪಹರಣ ಮತ್ತು ಯುವತಿಯರನ್ನು ಛೇಡಿಸುವಂತಹ ಕೃತ್ಯಗಳನ್ನು ಜಾಮೀನು ರಹಿತ ಅಪರಾಧ ಕೃತ್ಯಗಳೆಂದು ಪರಿಗಣಿಸಲಾಗಿದೆ. ಇದೇ ಕೃತ್ಯಗಳು 2ನೇ ಬಾರಿ ಮರುಕಳಿಸಿದರೆ ಮತ್ತು ಆ್ಯಸಿಡ್ನಂತಹ ದಾಳಿ ಮಾಡುವ ವ್ಯಕ್ತಿಗೆ 10 ವರ್ಷಗಳ ಕಾಲ ಕಠಿಣ ಜೈಲು ವಾಸ ಶಿಕ್ಷೆ ನೀಡುವ ಸಾಧ್ಯತೆಗಳಿವೆ. ಅಂತೆಯೇ ನೂತನ ಕಾನೂನಿನ ಅನ್ವಯ ಸಹಮತದ ಲೈಂಗಿಕ ಕ್ರಿಯೆಯ ವಯೋವಾನವನ್ನು 18 ವರ್ಷಕ್ಕೆ ಸೀಮಿತಗೊಳಿಸಲಾಗಿದೆ.
ಕಳದೆ ಫೆಬ್ರವರಿ 3ರಂದು ಲೋಕಸಭೆಯಲ್ಲಿ ಮಂಡಿಸಲ್ಪಟ್ಟ ಅತ್ಯಾಚಾರ ತಡೆ ಮಸೂದೆ ವಿಪಕ್ಷಗಳ ವಿರೋಧದಿಂದಾಗಿ ವಿಫಲವಾಗಿತ್ತು. ನಂತರ ಕೆಲವು ಬದಲಾವಣೆಗಳನ್ನು ಮಾಡಿದ ಸರ್ಕಾರ, ತಿದ್ದುಪಡಿ ಮಸೂದೆಯನ್ನು ಮಾರ್ಚ್ 19ರಂದು ನಡೆದ ಲೋಕಸಭೆಯಲ್ಲಿ ಮತ್ತು ಮಾರ್ಚ್ 21ರಂದು ನಡೆದ ರಾಜ್ಯಸಭೆಯಲ್ಲಿ ಮಂಡಿಸಿ ಪ್ರತಿಪಕ್ಷ ಸದಸ್ಯರ ವಿರೋಧದ ನಡುವೆಯೂ ಉಭಯ ಸದನಗಳ ಅನುಮೋದನೆ ಪಡೆದಿತ್ತು. ನಿನ್ನೆ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


