ಈಗಿನ ಸುದ್ದಿ

ಗುಟ್ಕಾ ನಿಷೇಧ: ರಾಜ್ಯಗಳ ಪ್ರತಿಕ್ರಿಯೆ ಪಡೆಯಲು ಸೂಚನೆ ನೀಡಿದ 'ಸುಪ್ರೀಂ'

ಗುಟ್ಕಾ ನಿಷೇಧ: ರಾಜ್ಯಗಳ ಪ್ರತಿಕ್ರಿಯೆ ಪಡೆಯಲು ಸೂಚನೆ ನೀಡಿದ 'ಸುಪ್ರೀಂ'
Published On :

ನವದೆಹಲಿ: ದೇಶಾದ್ಯಂತ ಗುಟ್ಕಾ ಉತ್ಪನ್ನಗಳನ್ನು ನಿಷೇಧಿಸುವ ಕುರಿತು ರಾಜ್ಯಗಳ ಅಭಿಪ್ರಾಯ ಸಂಗ್ರಹಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ನ್ಯಾ. ಜಿ.ಎಸ್. ಸಿಂಘ್ವಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಲಯ, ದೇಶಾದ್ಯಂತ ಗುಟ್ಕಾ ಮತ್ತು ಪಾನ್ ಮಸಾಲವನ್ನು ನಿಷೇಧಿಸುವ ಕುರಿತು ಎಲ್ಲಾ 23 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಸಂಗ್ರಹಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಇದಕ್ಕಾಗಿ ನ್ಯಾಯಾಲಯವು ಕೇಂದ್ರ ಆರೋಗ್ಯ ಇಲಾಖೆಗೆ ನಾಲ್ಕು ವಾರಗಳ ಗಡುವು ನೀಡಿದ್ದು, ಅವಧಿಯೊಳಗೆ ವರದಿ ಸಲ್ಲಿಸುವಂತೆಯೂ ಮತ್ತು ನಿಷೇಧದ ಕುರಿತು ಭಿನ್ನಾಭಿಪ್ರಾಯಗಳಿದ್ದರೆ ಅಫಿಡವಿಟ್ ಸಲ್ಲಿಸುವಂತೆಯೂ ಸೂಚಿಸಿದೆ.

ಗುಟ್ಕಾ ಮತ್ತು ಪಾನ್ ನಿಷೇಧ ಕುರಿತ ನಿಯಾಮಾವಳಿಗಳನ್ನು ಮತ್ತು ಸರ್ಕಾರದ ಆದೇಶ ಪಾಲನೆ ಕುರಿತ ವರದಿಯನ್ನು ಕೇಂದ್ರ ಸರ್ಕಾರ ಇಂದು ನ್ಯಾಯಾಲಯಕ್ಕೆ ಸಲ್ಲಿಸಿತು. ವರದಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸಿಂಘ್ವಿ ಅವರು, 'ಗುಟ್ಕಾ ಉತ್ಪಾದನೆಗೊಳ್ಳುತ್ತಿರುವ ಮತ್ತು ಮಾರಾಟವಾಗುತ್ತಿರುವ ದೆಹಲಿ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಅಲ್ಲಿನ ರಾಜ್ಯ ಸರ್ಕಾರಗಳೂ ಈ ಬಗ್ಗೆ ತಲೆಕೆಡಿಸಿಕೊಂಡತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಸರ್ಕಾರ ಈ ಕೂಡಲೆ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿ, ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಮೇ 3ಕ್ಕೆ ಮುಂದೂಡಿದೆ.

ಈ ಹಿಂದೆ ದೇಶಾದ್ಯಂತ ಗುಟ್ಕಾ ಮತ್ತು ಪಾನ್ ಉತ್ಪನ್ನಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ನೋಟಿಸ್‌ಗೆ ಉತ್ತರಿಸಿದ್ದ ಕೇಂದ್ರ ಸರ್ಕಾರ ಗುಟ್ಕಾ ಮತ್ತು ಪಾನ್ ಉತ್ಪನ್ನಗಳ ಮೇಲಿನ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಉತ್ತರಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.