ದ್ವಿಕೇಂದ್ರಿತ ಅಧಿಕಾರದ ಬಗ್ಗೆ ಚರ್ಚೆಯೇ ಅನಗತ್ಯ: ಪ್ರಧಾನಿ ಸಿಂಗ್
ನವದೆಹಲಿ: ದ್ವಿಕೇಂದ್ರಿತ ಅಧಿಕಾರದ ಬಗ್ಗೆ ಚರ್ಚೆ ನಡೆಸುವುದೇ ಅನಗತ್ಯ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗಿದ್ದ ಪದ್ಮಶ್ರೀ ಪುರಸ್ಕಾರ ಪ್ರಧಾನ ಸಮಾರಂಭದ ನಂತರ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು, ಇದು ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೇ. ದ್ವಿಕೇಂದ್ರಿತ ಅಧಿಕಾರದ ಬಗ್ಗೆ ಚರ್ಚೆಯೇ ಅನಗತ್ಯ. ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗಳು ಅವರ ವೈಯುಕ್ತಿಕ ಅಭಿಪ್ರಾಯಗಳೇ ಹೊರತು ಅದಕ್ಕೆ ಬೇರ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಈ ಹಿಂದೆಯೇ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ ಎಂದು ಹೇಳಿದರು.
ಮೂರನೇ ಬಾರಿ ಪ್ರಧಾನಿಯಾಗುವುದರ ಕುರಿತ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಇದು ಕಾಲ್ಪನಿಕ ಪ್ರಶ್ನೆಯಷ್ಟೇ. 2014ರ ಮೇ ವರೆಗೂ ಸರ್ಕಾರದ ಅವಧಿ ಇದೆ. ಸದ್ಯ ನಾವು ಸರ್ಕಾರದ ಅವಧಿ ಪೂರ್ಣಗೊಳಿಸಬೇಕು ಎಂದು ಹೇಳಿದರು. ಅಲ್ಲದೆ ರಾಹುಲ್ ಗಾಂಧಿ ಪ್ರಧಾನಿಯಾಗುವುದರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ರಾಹುಲ್ ಗಾಂಧಿ ಯಾವಾಗ ಬೇಕಾದರೂ ಪ್ರಧಾನಿಯಾಗಬಹುದು. ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ತಿಳಿಸಿದರು.
ಇತ್ತೀಚೆಗಷ್ಟೇ ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಅವರು ಪಕ್ಷದಲ್ಲಿರುವುದು ದ್ವಿಕೇಂದ್ರಿತ ಅಧಿಕಾರ. ಒಂದು ಸೋನಿಯಾ ಗಾಂಧಿ ಮತ್ತೊಂದು ಪ್ರಧಾನಿ ಮನಮೋಹನ್ ಸಿಂಗ್. ಇಂತಹ ಮಾದರಿಯಿಂದ ಪಕ್ಷಕ್ಕೆ ಯಾವುದೇ ಲಾಭ ಆಗಿಲ್ಲ. ಹೀಗಾಗಿ ಪ್ರಧಾನಿ ಸಿಂಗ್ ಅವರಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಹೇಳಿದ್ದರು. ದಿಗ್ವಿಜಯ್ ಅವರ ಹೇಳಿಕೆಗೆ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರ ವಿರೋಧ ಉಂಟಾಗಿತ್ತು. ಕೊನೆಗೆ ಪಕ್ಷದ ವಕ್ತಾರರಾದ ಜನಾರ್ಧನ ದ್ವಿವೇದಿ ಅವರು ದ್ವಿಕೇಂದ್ರಿತ ಅಧಿಕಾರ ಎನ್ನುವುದು ಮಾದರಿ ಪ್ರಯೋಗ. ಇದು ಯಶಸ್ವಿ ಕೂಡ ಆಗಿದೆ ಎಂದು ಸ್ಪಷ್ಟಪಡಿಸಿದ್ದರು.
ಕಾಂಗ್ರೆಸ್ ನಾಯಕರ ಹೇಳಿಕೆಗಳು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದವು. ಪ್ರತಿಪಕ್ಷ ಬಿಜೆಪಿ, ಯುಪಿಎಯಲ್ಲಿ ಅಧಿಕಾರವಿರುವುದು ಪ್ರಧಾನಿಗಳ ಬಳಿಯಲ್ಲ. ಬದಲಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಳಿ ಎಂದು ಟೀಕಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

