ಈಗಿನ ಸುದ್ದಿ

ಕಾಪ್ಟರ್ ಖರೀದಿಯಲ್ಲಿ ಬ್ರಿಟಿಷ್ ಏಜೆಂಟ್ ಕೈವಾಡ..?

ಕಾಪ್ಟರ್ ಖರೀದಿಯಲ್ಲಿ ಬ್ರಿಟಿಷ್ ಏಜೆಂಟ್ ಕೈವಾಡ..?
Published On :

ನವದೆಹಲಿ: ಬಹುಕೋಟಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಲಂಡನ್ ಮೂಲದ ಮಧ್ಯವರ್ತಿಯ ಕೈವಾಡವಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ.

ಇಟಲಿ ಮೂಲದ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆ ಮತ್ತು ಭಾರತದ ನಡುವೆ ಏರ್ಪಟ್ಟಿದ್ದ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಲಂಡನ್ ಮೂಲದ ಮಧ್ಯವರ್ತಿ ಕ್ರಿಸ್ಟಿಯನ್ ಮೈಕೆಲ್ ಪಾತ್ರವಿದೆ ಎಂದು ಹಗರಣದ ತನಿಖೆ ನಡೆಸುತ್ತಿರುವ ಇಟಲಿಯ ತನಿಖಾ ಸಂಸ್ಥೆ ಗುಮಾನಿಪಟ್ಟಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿರುವ ಸಂಸ್ಥೆ, ಹಗರಣದಲ್ಲಿ ಮೈಕೆಲ್ ಪಾತ್ರದ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಸ್ಪಷ್ಚಪಡಿಸಿದೆ. ಆದರೆ ಒಂದು ಅಂಶದ ಕುರಿತು ಬಲವಾಗಿ ಶಂಕೆ ವ್ಯಕ್ತಪಡಿಸಿರುವ ತನಿಖಾ ಸಂಸ್ಥೆ, 2005ರ ಮಾರ್ಚ್ 5ರಂದು ಮೈಕೆಲ್ ಭಾರತಕ್ಕೆ ಪ್ರಯಾಣ ಬೆಳೆಸಿದ್ದ ಎಂದು ತಿಳಿಸಿದೆ. ಅಲ್ಲದೆ ಸಾಕ್ಷ್ಯಗಳ ಪ್ರಕಾರ ದುಬೈ ಮೂಲದ ವ್ಯಕ್ತಿಯೊಬ್ಬ 2005ರಲ್ಲಿ ಭಾರತ ಹೆಲಿಕಾಪ್ಟರ್ ಖರೀದಿಯಲ್ಲಿ ತೊಡಗಿರುವಾಗ ಹಲವು ಬಾರಿ ದೆಹಲಿಗೆ ಪ್ರಯಾಣ ಬೆಳೆಸಿದ್ದನ್ನು ತನಿಖಾ ಸಂಸ್ಥೆ ಬಹಿರಂಗಗೊಳಿಸಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್ ಸಂಸ್ಥೆಯ ವಕ್ತಾರರು ಇದು ಕೇವಲ ಕಾಕತಾಳೀಯ. 2005ರಲ್ಲಿ ವಿಶ್ವಾದ್ಯಂತ ಸಾವಿರಾರು ವಿದೇಶಿಗರು ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅವರೆಲ್ಲರಿಗೂ ಹಗರಣದಲ್ಲಿ ಸಂಬಂಧವಿದೆ ಎನ್ನುವುದು ಮೂರ್ಖತನ ಎಂದಿದ್ದಾರೆ.

ಆದರೆ ಅಗಸ್ಟಾ ವೆಸ್ಟಲ್ಯಾಂಡ್ ವಕ್ತಾರರ ಹೇಳಿಕೆಯನ್ನು ತಿರಸ್ಕಿರಿಸಿರುವ ತನಿಖಾ ಸಂಸ್ಥೆಯ ಅಧಿಕಾರಿಗಳು, ಇದು ಕಾಕತಾಳೀಯವಲ್ಲ. ಇದರ ಹಿಂದೆ ಹಲವು ಅಂಶಗಳು ಅಡಗಿರುವ ಸಾಧ್ಯತೆ ಇದೆ. ಹಗರಣದಲ್ಲಿ ಲಂಡನ್ ಮೂಲದ ಏಜೆಂಟ್ ಮತ್ತು ದುಬೈ ಮೂಲದ ವ್ಯಕ್ತಿಯ ನೆರಳು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಂಪೂರ್ಣ ತನಿಖೆಯ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಮತ್ತೆ ಟೆಂಡರ್ ಸಲ್ಲಿಸಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್
ಕಾಪ್ಟರ್ ಖರೀದಿ ಹಗರಣದಿಂದ ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್ ಸಂಸ್ಥೆ ಮತ್ತೆ ಭಾರತದ ನೌಕಾಪಡೆ ಕರೆದಿರುವ ಬಿಡ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿದೆ. ಭಾರತೀಯ ನೌಕಾಪಡೆ ಕರೆದಿರುವ 2 ಬಿಡ್ ಪ್ರಕ್ರಿಯೆಯಲ್ಲಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಸಂಸ್ಥೆ ತನ್ನ ಅರ್ಜಿಸಲ್ಲಿಸಿದೆ. ಈ ಟೆಂಡರ್ ಮೂಲಕ ಕರಾವಳಿ ರಕ್ಷಣಾ ಪಡೆಗೆ 56 ಹೆಲಿಕಾಪ್ಟರ್‌ಗಳನ್ನು ಮತ್ತು ಅಗತ್ಯ ವಸ್ತುಗಳ ಸರಬರಾಜಿಗಾಗಿ 14 ಮಧ್ಯಮ ಗಾತ್ರದ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಭಾರತೀಯ ನೌಕಾಪಡೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ನೌಕಾಪಡೆ ಕರೆದಿರುವ ಈ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಸಂಸ್ಥೆ ಸೇರಿದಂತೆ ಒಟ್ಟು 2 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಯೂರೋಪ್ ಮೂಲದ ಯೂರೋಕಾಪ್ಟರ್ ಸಂಸ್ಥೆ ಕೂಡ ಬಿಡ್ಡಿಂಗ್ ಪಾಲ್ಗೊಂಡಿದೆ.

ಒಟ್ಟಾರೆ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣ ದಿನಕಳೆದಂತೆ ರೋಚಕ ಹಾದಿಯಲ್ಲಿ ಸಾಗುತ್ತಿದೆ. ಹಗರಣ ಸಂಬಂಧ ಈಗಾಗಲೇ ಹಲವು ಮದ್ಯವರ್ತಿಗಳು ಬಂಧನ ಭೀತಿ ಎದುರಿಸುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳುವಷ್ಟರಲ್ಲಿ ಯಾರು ಜೈಲು ಸೇರುತ್ತಾರೆ ಎಂದು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.