ಮಾಧ್ಯಮಗಳು ಮುಸ್ಲಿಂರನ್ನು ಸೈತಾನರಂತೆ ಬಿಂಬಿಸುತ್ತಿವೆ: ಕಾಟ್ಜು

ಹೈದರಾಬಾದ್: ಮಾಧ್ಯಮಗಳು ಮುಸ್ಲಿಂ ಸಮುದಾಯವನ್ನು ಸೈತಾನರಂತೆ ಬಿಂಬಿಸುತ್ತಿವೆ ಎಂದು ಪತ್ರಿಕಾ ಆಯೋಗದ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಹೇಳಿದ್ದಾರೆ.
"ಭಯಾನಕ ವರದಿಗಾರಿಕೆ: ಮಾಧ್ಯಮ ಎಷ್ಟು ಸೂಕ್ಷ್ಮ..?" ಎಂಬ ವಿಷಯದ ಕುರಿತು ಹೈದರಾಬಾದಿನಲ್ಲಿ 'ದಿ ಹಿಂದೂ' ಪತ್ರಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾರ್ಕಂಡೇಯ ಕಾಟ್ಜು, 'ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ'.
'ದೇಶದ ಯಾವುದೇ ಭಾಗದಲ್ಲಿ ಬಾಂಬ್ ಸ್ಫೋಟಗೊಂಡರೂ ಮಾಧ್ಯಮಗಳು ಮೊದಲು ಮುಸಲ್ಮಾನ್ ಹೆಸರುಗಳನ್ನು, ಇಂಡಿಯನ್ ಮುಜಾಹಿದ್ದೀನ್, ಜೆಇಎಂ, ಹರ್ಕತ್ ಉಲ್ ಜಿಹಾದ್ ಇ ಇಸ್ಲಾಂ ನಂತಹ ಕೆಲ ಮುಸ್ಲಿಂ ಸಂಘಟನೆಗಳ ಹೆಸರುಗಳನ್ನು ಟಿವಿ ಪರದೆಯ ಮೇಲೆ ಹಾಕುತ್ತವೆ. ಆ ಮೂಲಕ ಮುಸಲ್ಮಾನ್ ಸಮುದಾಯದ ಮೇಲೆ ಜನರಿಗೆ ತಪ್ಪು ಕಲ್ಪನೆ ಮೂಡುವಂತೆ ಮಾಡುತ್ತಿವೆ. ಅಲ್ಲದೆ ಬಾಂಬ್ ಸ್ಫೋಟಗೊಂಡ ಕುರಿತು ದುಷ್ಕರ್ಮಿಗಳು ರವಾನಿಸಿರುವ ಎಸ್‌ಎಂಎಸ್ ಮತ್ತು ಈ ಮೇಲ್‌ಗಳನ್ನು ಪದೇ ಪದೇ ಪ್ರದರ್ಶಿಸಿ ಮುಸ್ಲಿಂ ಸಮುದಾಯವನ್ನು ಸೈತಾನರಂತೆ ಬಿಂಬಿಸುತ್ತಿವೆ'.
'ಈಮೇಲ್ ಮತ್ತು ಎಸ್‌ಎಂಎಸ್‌ಗಳನ್ನು ಯಾವುದೇ ಅಪರಿಚಿತ ವ್ಯಕ್ತಿ, ಯಾವುದೇ ಹೆಸರುಗಳನ್ನು ಬಳಸಿಕೊಂಡು ರವಾನೆ ಮಾಡಬಹುದು. ಯಾರೋ ಒಬ್ಬ ವ್ಯಕ್ತಿ ಮಾಡುವ ದುಷ್ಕೃತ್ಯಕ್ಕೆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಇದರಿಂದ ಜಾತೀಯತೆ ಮತ್ತು ಧಾರ್ಮಿಕತೆಯನ್ನು ಪ್ರಚೋದಿಸಿದಂತಾಗುತ್ತದೆ. ಇದು ಜವಾಬ್ದಾರಿಯುತ ಮಾಧ್ಯಮಗಳ ಕರ್ತವ್ಯವೇ..?'
'ಮಾಧ್ಯಮಗಳಿಗೆ ತಮ್ಮದೇ ಆದ ನೀತಿ ಸಂಹಿತೆಗಳಿವೆ. ಸಂವಿಧಾನ ಮಾಧ್ಯಮಗಳಿಗೆ ನೀಡಿರುವ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಅವು ಕರ್ತವ್ಯ ನಿರ್ವಹಿಸಬೇಕಿದೆ. ಆದರೆ ಈ ಬಗ್ಗೆ ನಾನು ಎಲ್ಲೇ ಮಾತನಾಡಿದರು ಮಾಧ್ಯಮಗಳು ಇದನ್ನು ಪತ್ರಿಕಾ ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆಯಿಡುತ್ತವೆ. ಇಂತಹ ವಿಚಾರಗಳ ಬಗ್ಗೆ ನಾನು ಧ್ವನಿ ಎತ್ತುತ್ತೇನೆ'. ಎಂದು ಕಾಟ್ಜು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಾರೆ ಮಾಧ್ಯಮಗಳ ವಿರುದ್ಧ ಮಾರ್ಕಂಡೇಯ ಕಾಟ್ಜು ಅವರು ಬಹುದಿನಗಳಿಂದ ಹೊಂದಿದ್ದ ಅಸಮಾಧಾನವನ್ನು ಇದೀಗ ಹೊರಹಾಕಿದ್ದಾರೆ. ಟಿಆರ್‌ಪಿಗಾಗಿಯೋ, ಪತ್ರಿಕೆಗಳ ಪ್ರಸಾರದ ಸಂಖ್ಯೆ ಹೆಚ್ಚಳಕ್ಕಾಗಿ ಕೆಲವು ನಿರ್ಧಿಷ್ಟ ಮಾಧ್ಯಮಗಳು ಮತ್ತು ಪತ್ರಿಕೆಗಳು ಮಾಡುವ ಕಾರ್ಯಕ್ಕೆ ಇಡೀ ಮಾಧ್ಯಮ ಮತ್ತು ಪತ್ರಿಕಾ ಸಮೂಹಗಳನ್ನು ದೂಷಿಸುವುದು ಸರಿಯಲ್ಲ. ಈ ವಿಷಯ ಸ್ವತಃ ಕಾಟ್ಜು ಅವರಿಗೂ ತಿಳಿದಿದೆ. ಈಗಲೂ ಹಲವು ಹೆಸರಾಂತ ಮಾಧ್ಯಮಗಳು ಜವಾಬ್ದಾರಿಯುತವಾಗಿಯೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದೆ ಎಂಬುದನ್ನು ಕಾಟ್ಜು ಅವರು ಮರೆಯಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


