ಈಗಿನ ಸುದ್ದಿ

ಕ್ಷಿಪಣಿ ಪರೀಕ್ಷೆಗೆ ಮುಂದಾದ ಉ.ಕೊರಿಯಾ

ಕ್ಷಿಪಣಿ ಪರೀಕ್ಷೆಗೆ ಮುಂದಾದ ಉ.ಕೊರಿಯಾ
Published On :

ಸಿಯೋಲ್: ಉತ್ತರ ಕೊರಿಯಾ ತಾನು ಸಿದ್ಧಪಡಿಸಿರುವ ಅತ್ಯಾಧುನಿಕ ಅಣ್ವಸ್ತ್ರ ಸಿಡಿತಲೆ ಕ್ಷಿಪಣಿಯ ಪರೀಕ್ಷೆಗೆ ಮುಂದಾಗಿದ್ದು, ಏಪ್ರಿಲ್ 15ರೊಳಗೆ ಪರೀಕ್ಷೆ ನಡೆಸುತ್ತೇವೆ ಎಂದು ಉ.ಕೊರಿಯಾದ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

ನಿನ್ನೆಯಷ್ಟೇ ದ.ಕೊರಿಯಾದ ಪ್ರವಾಸಿಗರಿಗೆ ದೇಶತೊರೆಯುವಂತೆ ಎಚ್ಚರಿಕೆ ನೀಡಿದ್ದ ಉ.ಕೊರಿಯಾ, ಅಮೆರಿಕದ ವಿರೋಧದ ನಡುವೆಯೂ ಇಂದು ತನ್ನ ಬಹು ನಿರೀಕ್ಷಿತ ಕ್ಷಿಪಣಿ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಉ.ಕೊರಿಯಾದ ವಿದೇಶಾಂಗ ಸಚಿವ ಯುನ್ ಬ್ಯುಂಗ್ ಸೇ ಅವರು, ಸಂಸದೀಯ ಸಭೆಯನ್ನು ಏರ್ಪಡಿಸಿ ಕ್ಷಿಪಣಿ ಪರೀಕ್ಷೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಕ್ಷಿಪಣಿ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಪರೀಕ್ಷೆ ನಡೆಸಲು ನಾವು ಸಿದ್ಧವಾಗಿದ್ದು, ಯಾವುದೇ ಸಮಯದಲ್ಲಿ ಕ್ಷಿಪಣಿ ಉಡಾವಣೆಗೊಳ್ಳಬಹುದು ಎಂದು ಹೇಳಿದ್ದಾರೆ.

ಉತ್ತರ ಕೊರಿಯಾ ಸಿದ್ದ ಪಡಿಸಿರುವ ಈ ಕ್ಷಿಪಣಿ 'ಮುಸುಡಾನ್ ಕ್ಷಿಪಣಿ'ಯ ಮಾದರಿಯಲ್ಲಿದ್ದು, ಇದರ ವ್ಯಾಪ್ತಿ ಸುಮಾರು 3.500 ಕಿಮೀ ಎಂದು ಹೇಳಲಾಗುತ್ತಿದೆ. ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಈ ಕ್ಷಿಪಣಿ, 900 ರಿಂದ 1000 ಕೆಜಿ ಸ್ಫೋಟಕಗಳನ್ನು ಹೊತ್ತಯಬಲ್ಲದು ಎಂದು ತಿಳಿದು ಬಂದಿದೆ. ಉ.ಕೊರಿಯಾದಿಂದ ಸುಮಾರು 3000 ಕಿಮಿ ದೂರದಲ್ಲಿರುವ ಅಮೆರಿಕ ಸೈನಿಕರ ಕ್ಯಾಂಪನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಕ್ಷಿಪಣಿಯನ್ನು ತಯಾರಿಸಲಾಗಿದೆ ಎಂದು ಅಮೆರಿಕ ದೂರುತ್ತಿದೆ.

ಒಂದು ವೇಳೆ ಈ ಕ್ಷಿಪಣಿ ಅಮೆರಿಕ ಸೈನಿಕರ ಕ್ಯಾಂಪ್ ಬಳಿ ಸ್ಫೋಟಗೊಂಡಿದ್ದೇ ಆದರೆ, ಅಲ್ಲಿ ಅಪಾರ ಪ್ರಮಾಣದ ಸಾವುನೋವುಗಳು ಸಂಭವಿಸಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಉ.ಕೊರಿಯಾ ಈ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಲು ಅಂತಾರಾಷ್ಟ್ರೀಯ ಸಮುದಾಯಗಳು ತೀವ್ರವಾಗಿ ವಿರೋಧಿಸುತ್ತಿವೆ. ಅಲ್ಲದೆ ಏಪ್ರಿಲ್ 15ರಂದು ಉ.ಕೊರಿಯಾ ಮಾಜಿ ಅಧ್ಯಕ್ಷ ಕಿಮ್ ಸಂಗ್ ಅವರ ಜನ್ಮದಿನಾಚರಣೆಯಾಗಿದ್ದು, ಅಂದೇ ಕ್ಷಿಪಣಿಯನ್ನು 'ಪ್ಯೋಂಗ್‌ಯಾಂಗ್‌' ಗಡಿಪ್ರದೇಶದಿಂದ ಉಡಾವಣೆ ಮಾಡಬಹುದು ಎಂದು ಶಂಕಿಸಲಾಗುತ್ತಿದೆ.

ಮೂಲಗಳ ಪ್ರಕಾರ ಕ್ಷಿಪಣಿ ಉಡಾವಣೆಗೆ ಬೇಕಾದ ಎಲ್ಲ ರೀತಿಯ ಕಾರ್ಯಗಳನ್ನು ಉ.ಕೊರಿಯಾದ ಮಿಲಿಟರಿ ಅಧಿಕಾರಿಗಳು ಪೂರ್ಣಗೊಳಿಸಿದ್ದು, ಉಡಾವಣೆಗೆ ಬೇಕಾಗುವ ಮೊಬೈಲ್ ಲಾಂಚರ್‌ಗಳನ್ನು ಪ್ಯೋಂಗ್‌ಯಾಂಗ್ ಗಡಿ ಪ್ರದೇಶಕ್ಕೆ ರವಾನಿಸಲಾಗಿದೆ. ಅಲ್ಲಿಂದಲೇ ಕ್ಷಿಪಣಿಯನ್ನು ಉಡಾವಣೆ ಮಾಡಲಾಗುತ್ತದೆ.

ಒಟ್ಟಾರೆ ಕ್ಷಿಪಣಿ ಉಡಾವಣೆಯನ್ನು ಪ್ರತಿಷ್ಟೆಯಾಗಿ ಸ್ವೀಕರಿಸಿರುವ ಉ.ಕೊರಿಯಾ ಅಂತಾರಾಷ್ಟ್ರೀಯ ಸಮುದಾಯಗಳ ವಿರೋಧದ ನಡುವೆಯೇ ಉಡಾವಣೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.