ಈಗಿನ ಸುದ್ದಿ

ನಟ ಪ್ರಾಣ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ನಟ ಪ್ರಾಣ್ ಗೆ  ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
Published On :

ನವದೆಹಲಿ: ಬಾಲಿವುಡ್ ಹಿರಿಯ ನಟ ಪ್ರಾಣ್ ಅವರಿಗೆ ಚಿತ್ರೋದ್ಯಮದ ಅತ್ತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದು ಬಂದಿದೆ. ಜೀವಮಾನದ ಶ್ರೇಷ್ಠ ಸಾಧನೆಗಾಗಿ ನಟ ಪ್ರಾಣ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಾಲಿವುಡ್ ಅಂಗಳದ ಕಪ್ಪು ಬಂಗಾರವೆಂದೇ ಖ್ಯಾತಿಯಾಗಿರುವ ಹಿರಿಯ ನಟ ಪ್ರಾಣ್ ಅವರ ಜೀವಮಾನದ ಶ್ರೇಷ್ಠ ಸಾಧನೆಯನ್ನು ಗಮನಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಿನಿಮಾ ಮಂದಿಯಿಂದ ಪ್ರೀತಿಯಿಂದ 'ಪ್ರಾಣ್' ಎಂದು ಕರೆಸಿಕೊಳ್ಳುವ ಅವರ ಸಂಪೂರ್ಣ ಹೆಸರು 'ಪ್ರಾಣ್ ಕಿಶನ್ ಸಿಖಂದ್'.

1945ರಲ್ಲಿ ದಾಲ್ಸುಖ್ ಪಂಚೋಲಿ ಅವರ ನಿರ್ದೇಶನದ 'ಯಮ್ಲಾ ಜತ್' ಎನ್ನುವ ಚಿತ್ರದಲ್ಲಿ ಖಳನಾಯಕರಾಗಿ ಬಾಲಿವುಡ್ ಪ್ರವೇಶಿಸಿದ ಪ್ರಾಣ್, ಸುಮಾರು 350ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಖಳನಾಯಕರಾಗಿಯೇ ಅಭಿನಯಿಸಿರುವ ಪ್ರಾಣ್, ಖ್ಯಾತ ನಾಯಕರನ್ನೂ ಮೀರಿಸುವ ಮಟ್ಟಿಗೆ ಅಭಿನಯ ತೋರಿಸಿದ್ದಾರೆ. ಖಳನಾಯಕರಾಗಿ ಅಭಿನಯಿಸಿದ್ದರೂ ನಾಯಕರಿಗೆ ಸಿಗುವ ಸ್ಥಾನಮಾನ ಸಂಪಾದಿಸಿದ್ದ ಪ್ರಾಣ್, ಬಾಲಿವುಡ್ನಲ್ಲಿ ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಸೂಪರ್ ಹಿಟ್ ಚಲನಚಿತ್ರ 'ಜಂಜೀರ್'ನಲ್ಲಿ 'ಶೇರ್ಖಾನ್' ಪಾತ್ರ ಮಾಡಿದ್ದ ಪ್ರಾಣ್, ತಮ್ಮ ಅಮೋಘ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದರು. ಆ ಚಿತ್ರದಿಂದಾಗಿ ನಟ ಅಮಿತಾಬ್ ಬಚ್ಚನ್ ಅವರಿಗೆ 'ಆಂಗ್ರಿ ಯಂಗ್ಮ್ಯಾನ್' ಎಂಬ ಬಿರುದು ಕೂಡ ದೊರೆಯಿತು. ಪ್ರಾಣ್ ಅಭಿನಯಿಸಿರುವ ಬಹುತೇಕ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗಿದ್ದು, ಮಿಲನ್, ಹಾಫ್ ಟಿಕೆಟ್, ಬರ್ಸಾತ್ ಕಿ ಏಕ್ ರಾತ್, ದೇವದಾಸ್, ಮಧುಮತಿ, ಕಾಶ್ಮೀರ್ ಕಿ ಖಾಲಿ ಉಪ್ಕಾರ್, ಬ್ರಹ್ಮಚಾರಿ, ಜಾನಿ ಮೇರಾ ನಾಮ್, ಪೂರ್ವ್ ಔರ್ ಪಶ್ಚಿಮ್ ನಂತಹ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

1960ರಿಂದ 70ರ ವೇಳೆಯಲ್ಲಿ ತಮ್ಮ ವೃತ್ತಿ ಜೀವನದ ಉತ್ತುಂಗ ಸ್ಥಾನದಲ್ಲಿದ್ದ ಪ್ರಾಣ್, ಆ ವೇಳೆಯಲ್ಲಿ ಬಿಡುಗಡೆಯಾದ ಬಹುತೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ ವರ್ಷದಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಎಲ್ಲ ಚಿತ್ರಗಳಲ್ಲಿಯೂ ಪ್ರಾಣ್ ಅವರ ಅಭಿನಯವನ್ನು ನಾವು ಕಾಣಬಹುದು. ಕೇವಲ ಖಳನಾಯಕರಾಗಿಯಷ್ಟೇ ಅಲ್ಲದೆ ಪ್ರಾಣ್ ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ತಾವೊಬ್ಬ ಉತ್ತಮ ನಟ ಎಂಬುದನ್ನು ಸಾಬೀತು ಪಡಿಸಿದ್ದಾರೆ. 1984ರ ಬ್ಲಾಕ್ಬಸ್ಟರ್ ಚಿತ್ರ 'ಶರಾಬಿ'ಯಲ್ಲಿ ಅಮಿತಾಬ್ ಅವರ ತಂದೆಯಾಗಿ ಅಭಿನಯಿದ್ದ ಪ್ರಾಣ್, 1973ರ ಜಂಜೀರ್ ಚಿತ್ರದಲ್ಲಿ ಶೇರ್ಖಾನ್ ಪಾತ್ರದ ಮೂಲಕ ಬಾಲಿವುಡ್ ಪರಿಚಿತರಾದರು.

ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ತಮ್ಮ ಸೇವೆ ಸಲ್ಲಿಸಿರುವ ಪ್ರಾಣ್ ಅವರಿಗೆ ಚಿತ್ರೋಧ್ಯಮದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಒಲಿದಿರುವುದು ಬಾಲಿವುಡ್ ಮಂದಿಗೆ ಖುಷಿ ನೀಡಿದೆ. ತಮ್ಮ ವೃತ್ತಿ ಜೀವನದಲ್ಲಿ ಈಗಾಗಲೇ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದಿರುವ ಪ್ರಾಣ್ ಅವರು, 2001ರಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು.

ಇತ್ತೀಚೆಗೆ ಅಂದರೆ ಫೆಬ್ರವರಿ 12ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದ ಪ್ರಾಣ್ ಅವರಿಗೆ ಭಾರತೀಯ ಚಿತ್ರೋಧ್ಯಮ ಮತ್ತು ಭಾರತ ಸರ್ಕಾರ ಇಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುವ ಮೂಲಕ ಅವರಿಗೆ ಗೌರವಸಲ್ಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.