ಚುನಾವಣೆಯಿಂದ ಹಿಂದೆ ಸರಿದ ಅಂಬಿ

ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಮಾಜಿ ಕೇಂದ್ರ ಸಚಿವ ಮತ್ತು ನಟ ಅಂಬರೀಶ್ ಅವರು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಹಂಚಿಕೆ ಕುರಿತು ತೀವ್ರ ಬೇಸರಕ್ಕೊಳಗಾಗಿರುವ ನಟ ಅಂಬರೀಶ್, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಟಿಕೆಟ್ ಹಂಚಿಕೆ ಸರಿಯಾಗಿ ಆಗಿಲ್ಲ ಎಂದು ಆರೋಪಿಸಿರುವ ಅಂಬರೀಶ್ ಶ್ರೀರಂಗಪಟ್ಟಣ ಕ್ಷೇತ್ರದಿಂದ ಎಸ್.ಎ. ರವೀಂದ್ರ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ, ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ನಟ ಅಂಬರೀಶ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಮಂಡ್ಯ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು.
ತಮ್ಮ ತೀರ್ಮಾನದ ಕುರಿತು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ನಟ ಅಂಬರೀಶ್, 'ಎಸ್.ಎ.ರವೀಂದ್ರ ಅವರು ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಇದು ಕಳೆದ ಹಲವು ಚುನಾವಣೆಗಳಲ್ಲಿ ಸ್ಪಷ್ಟವಾಗಿದೆ. ಅಲ್ಲದೆ ಈ ಕುರಿತು ವರಿಷ್ಠರ ಗಮನಕ್ಕೂ ನಾನು ತಂದಿದ್ದೆ. ಹೀಗಿದ್ದೂ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ತಮಗೆ ಅತೀವ ಬೇಸರ ತಂದಿದೆ'.
'ಹಲವಾರು ಬಾರಿ ಸಭೆ ಸಮಾರಂಭಗಳಲ್ಲಿ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ರವೀಂದ್ರ ಅವರ ವಿರುದ್ಧ ನಾನೇ ಮಾತನಾಡಿದ್ದೆ. ಈಗ ಯಾವ ಮುಖ ಇಟ್ಟುಕೊಂಡು ಮಂಡ್ಯದ ಜನರ ಮುಂದೆ ಹೋಗಿ ಮತ ಕೇಳಲಿ..? ಕಾಂಗ್ರೆಸ್ ಹೈಕಮಾಂಡ್ ಧೋರಣೆಯಿಂದ ತಮಗೆ ನೋವಾಗಿದ್ದು, ತಾವು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ' ಎಂದು ನಟ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಅಂಬಿ ಸ್ಪರ್ಧಿಸದಿದ್ದರೆ ನಾನೂ ಸ್ಪರ್ಧಿಸಲ್ಲ: ಎಲ್.ಡಿ.ರವಿ
ನಟ ಅಂಬರೀಶ್ ಅವರು ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದಂತೆ ಮಂಡ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟವಾಗಿದೆ. ಮಂಡ್ಯದ ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಲ್.ಡಿ.ರವಿ ಅವರು, ನಟ ಅಂಬರೀಶ್ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ತಾವೂ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಮಂಡ್ಯದ ಮೇಲುಕೋಟೆಯ ದುದ್ದ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ರವಿ ಅವರು, ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಗೆ ವಾಪಸ್ಸಾಗುತ್ತಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ ಆರಂಭದಿಂದಲೂ ಗದ್ದಲ ಮತ್ತು ಪ್ರತಿಭಟನೆಗಳಿಂದಲೇ ಕೂಡಿತ್ತು. ತಮ್ಮ ಬೆಂಬಲಿಗರಿಗೆ, ತಮ್ಮ ನಾಯಕರಿಗೆ ಟಿಕೆಟ್ ಕೊಡಿ ಎಂದು ಕಾಂಗ್ರೆಸ್ ಕಚೇರಿ ಎದುರು ನಡೆಯುತ್ತಿದ್ದ ಧರಣಿ ದಿನಕಳೆದಂತೆ ಸಾಮಾನ್ಯ ಎನ್ನುವ ರೀತಿಗೆ ಮಾರ್ಪಟ್ಟಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನಟ ಅಂಬರೀಶ್ ಎಸ್.ಎ. ರವೀಂದ್ರ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಚುನಾವಣೆಯಿಂದಲೇ ಹಿಂದೆ ಸರಿಯುವ ಮೂಲಕ ಹೊಸ ಮುನ್ನುಡಿ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


