ಈಗಿನ ಸುದ್ದಿ

ರವೀಂದ್ರ ಟಿಕೆಟ್ ವಾಪಸ್, ನಾಳೆ ಅಂಬಿ ನಾಮಪತ್ರ ಸಲ್ಲಿಕೆ

ರವೀಂದ್ರ ಟಿಕೆಟ್ ವಾಪಸ್, ನಾಳೆ ಅಂಬಿ ನಾಮಪತ್ರ ಸಲ್ಲಿಕೆ
Published On :

ಮಂಡ್ಯ: ಶ್ರೀರಂಗಪಟ್ಟಣ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದ ರವೀಂದ್ರ ಶ್ರೀಕಂಠಯ್ಯ ಅವರು ಮಂಡ್ಯ ಕಾಂಗ್ರೆಸ್ ಭಿನ್ನಮತದಿಂದಾಗಿ ಟಿಕೆಟ್ ವಂಚಿತರಾಗಿದ್ದು, ನಾಳೆ ನಟ ಅಂಬರೀಶ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ.

ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್ ನೀಡಿದರೆ ತಾವು ಸ್ಫರ್ಧಿಸುವುದಿಲ್ಲ ಎಂದು ಬಾಂಬ್ ಸಿಡಿಸಿದ್ದ ನಟ ಅಂಬರೀಶ್ ಅವರ ಒತ್ತಡಕ್ಕೆ ಮಣಿದಿರುವ ಕಾಂಗ್ರೆಸ್ ಹೈಕಮಾಂಡ್, ಕೊನೆಗೂ ರವೀಂದ್ರ ಶ್ರೀಕಂಠಯ್ಯ ಅವರಿಗೆ ಘೋಷಣೆ ಮಾಡಿದ್ದ ಟಿಕೆಟ್ ಅನ್ನು ಬೇರೊಬ್ಬ ಅಭ್ಯರ್ಥಿಗೆ ನೀಡಿದೆ. ಶ್ರೀರಂಗಪಟ್ಟಣದ ಮತ್ತೋರ್ವ ಕಾಂಗ್ರೆಸ್ ನಾಯಕರಾದ ಲಿಂಗರಾಜು ಅವರಿಗೆ ಶ್ರೀರಂಗಪಟ್ಟಣ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

ಆದರೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರವೀಂದ್ರ ಅವರು, ಅಂಬರೀಶ್ ಬಗ್ಗೆ ಕಿಡಿಕಾರಿದ್ದಾರೆ. 'ನಾನು ಅಂಬರೀಶ್ ಅವರಿಗೆ ಏನು ದ್ರೋಹ ಮಾಡಿದ್ದೇನೋ ಗೊತ್ತಿಲ್ಲ. ವಿನಾಕಾರಣ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಅವರು ತಮ್ಮ ತಾರಾ ವರ್ಚಸ್ಸಿನ ಪ್ರಭಾವ ಬಳಸಿ ನನಗೆ ಟಿಕೆಟ್ ಸಿಗದಂತೆ ಮಾಡಿದ್ದಾರೆ. ಅವರು ಕಳೆದ ಬಾರಿ ಲೋಕಸಭಾ ಚುನಾವಣೆಗೆ ನಿಂತಾಗ ಅವರ ಪರವಾಗಿ ಪ್ರಚಾರ ಮಾಡಿದ್ದೆ. ಆದರೂ ಕೂಡ ಅವರು ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾರೆ. ಮಂಡ್ಯದ ರಾಜಕಾರಣ ಕಲುಷಿತಗೊಂಡಿದೆ. ಅಂಬರೀಶ್ ಬೆಂಬಲಿತ ಅಭ್ಯರ್ಥಿಗಳು ಯಾರೂ ಕೂಡ ಗೆಲುವು ಸಾಧಿಸುವುದಿಲ್ಲ' ಎಂದು ರವೀಂದ್ರ ಅವರು ಹೇಳಿದರು.

ಇದೇ ವೇಳೆ ರವೀಂದ್ರ ಅವರ ಬೆಂಬಲಿಗರಾದ ಸತ್ಯಾನಂದ ಅವರು ಮಾತನಾಡಿ, ನಟ ಅಂಬರೀಶ್ ಅವರು ಹಣಪಡೆದು ರಾಜಕಾರಣ ಮಾಡುತ್ತಿದ್ದಾರೆ. ತಮಗೆ ಹಣ ನೀಡಿದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು.

ಬದಲಾದ ಕಾಂಗ್ರೆಸ್ ಹೈಕಮಾಂಡ್ ನಿಲುವು ಕುರಿತು ಹರ್ಷ ವ್ಯಕ್ತಪಡಿಸಿರುವ ನಟ ಅಂಬರೀಶ್, ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಸ್ಫರ್ಧಿಸದಿರುವ ತಮ್ಮ ನಿರ್ಧಾರವನ್ನು ಹಿಂಪಡೆದುಕೊಂಡಿದ್ದು, ನಾಳೆಯೇ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಟಿಕೆಟ್ ವಂಚಿತ ಅಭ್ಯರ್ಥಿ ರವೀಂದ್ರ ಮತ್ತು ಸತ್ಯಾನಂದ ಅವರ ಟೀಕೆಗಳು ಕುರಿತು ಮಾತನಾಡಿದ ಅವರು, ಸತ್ಯಾನಂದ ಅವರ ತಂದೆ ತಾಯಿ ಅವರಿಗೆ ಒಳ್ಳೆಯ ಹೆಸರಿಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಅವರು ನಡೆದುಕೊಳ್ಳಲಿ. ಹಣಕ್ಕಾಗಿ ನಾನು ಯಾರ ಮುಂದೆಯೂ ಕೈ ಚಾಚುವ ವ್ಯಕ್ತಿಯಲ್ಲ. ನಾನು ಕೇಳಿದರೆ ಇಲ್ಲ ಎನ್ನದೇ ಸಾವಿರಾರು ಕೈಗಳು ಕೊಡುತ್ತವೆ. ಆದರೆ ನಮ್ಮದು ಕೊಡುವ ಕೈಗಳೇ ಹೊರತು ಪಡೆಯುವ ಕೈ ಗಳಲ್ಲ. ಎಸ್.ಎಂ.ಕೃಷ್ಣ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದೇ ಕೃಷ್ಣ ಅವರು. ಕೆಲವು ವಿಚಾರಗಳ ಬಗ್ಗೆ ಗೊಂದಲವಿತ್ತು. ಈಗ ಅವರ ಮತ್ತು ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ' ಎಂದು ಹೇಳಿದ್ದಾರೆ.

ಈ ನಡುವೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೈ ತಪ್ಪಿರುವ ಕುರಿತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರು ಹೈಕಮಾಂಡ್ ವಿರುದ್ಧ ತೀವ್ರ ಬೇಸರಗೊಂಡಿದ್ದಾರೆ. ಹೀಗಾಗಿ ಮಂಡ್ಯ ಜಿಲ್ಲೆಯ ಪ್ರಚಾರ ಕಾರ್ಯದಿಂದ ಅವರು ದೂರ ಉಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ಮಂಡ್ಯ ಕಾಂಗ್ರೆಸ್ ಕೂಡ ಈ ಬಗ್ಗೆ ತಟಸ್ಥ ನಿಲುವು ತಳೆದಿದೆ.

ಒಟ್ಟಾರೆ ಹಲವು ದಿನಗಳಿಂದ ಮಾಧ್ಯಮಗಳ ಕೇಂದ್ರ ಬಿಂದುವಾಗಿದ್ದ ಮಂಡ್ಯ ಕಾಂಗ್ರೆಸ್‌ನಲ್ಲಿನ ಭಿನ್ನಮತ, ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಚುನಾವಣೆ ಮುಗಿಯುವುದರೊಳಗೆ ಯಾವೆಲ್ಲಾ ಬದಲಾವಣೆಗಲಾಗುತ್ತವೆ ಎಂದು ಕಾದುನೊಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.