ಈಗಿನ ಸುದ್ದಿ

ವಿಜೇಂದರ್ ಡ್ರಗ್ಸ್ ಸೇವಿಸಿಲ್ಲ: ನಾಡಾ

ವಿಜೇಂದರ್ ಡ್ರಗ್ಸ್ ಸೇವಿಸಿಲ್ಲ: ನಾಡಾ
Published On :

ನವದೆಹಲಿ: ಬಾಕ್ಸರ್ ವಿಜೇಂದರ್ ಸಿಂಗ್ ಅವರು ಡ್ರಗ್ಸ್ ಸೇವಿಸಿಲ್ಲ ಎಂದು ಅವರನ್ನು ಪರೀಕ್ಷೆಗೊಳಪಡಿಸಿದ್ದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ(ನಾಡಾ) ಸ್ಪಷ್ಟಪಡಿಸಿದೆ.

ಬಹುಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಸಂಶಯಾಸ್ಪದರಾಗಿದ್ದ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಪರೀಕ್ಷೆಗೊಳಪಡಿಸಿದ್ದ ನಾಡಾ, ಇಂದು ತನ್ನ ಪರೀಕ್ಷಾ ವರದಿಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಹಿಂದುರುಗಿಸಿದೆ. ವರದಿಯಲ್ಲಿ ವಿಜೇಂದರ್ ಸಿಂಗ್ ಅವರು ಯಾವುದೇ ಮಾದಕ ಪದಾರ್ಥಗಳನ್ನು ಸೇವಿಸಿಲ್ಲ ಎಂದು ನಾಡಾ ಸ್ಪಷ್ಟಪಡಿಸಿದೆ.

ಪಂಜಾಬ್‌ನ ಜೀರಕ್‌ಪುರದಲ್ಲಿ ಪತ್ತೆಯಾದ ಬಹುಕೋಟಿ ಮಾದಕ ವಸ್ತು ಪ್ರಕರಣದಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಸ್ವತಃ ವಿಜೇಂದರ್ ಸಿಂಗ್ ಅವರ ಗೆಳೆಯ ಬಾಕ್ಸರ್ ರಾಮ್ ಸಿಂಗ್ ತಾನು ಮತ್ತು ವಿಜೇಂದರ್ ಸಿಂಗ್ ಡ್ರಗ್ಸ್ ಸೇವಿಸುತ್ತಿದ್ದೆವು ಎಂದು ಪೊಲೀಸರ ಬಳಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ರಾಮ್‌ಸಿಂಗ್ ನೀಡಿದ ಹೇಳಿಕೆ ಇಡೀ ಕ್ರೀಡಾ ಕ್ಷೇತ್ರವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ಲದೆ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಅನುಮಾನದಿಂದ ನೋಡುವಂತೆ ಮಾಡಿತ್ತು.

ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಅನುಮಾನದಿಂದ ನೋಡಲು ಇದ್ದ ಮತ್ತೊಂದು ಕಾರಣವೆಂದರೆ ಅಪಾರ ಪ್ರಮಾಣದ ಡ್ರಗ್ಸ್ ಪತ್ತೆಯಾದ ಸ್ಥಳ. ಏಕೆಂದರೆ ವಿಜೇಂದರ್ ವಾಸವಿರುವ ಜೀರಕ್‌ಪುರದ ಅಪಾರ್ಟ್‌ಮೆಂಟ್ ಆವರಣದಲ್ಲಿಯೇ ಡ್ರಗ್ಸ್ ಪತ್ತೆಯಾಗಿತ್ತು. ಅಲ್ಲದೆ ಪಕ್ಕದಲ್ಲಿಯೇ ವಿಜೇಂದರ್ ಪತ್ನಿಯ ಕಾರು ಕೂಡ ಇತ್ತು. ಈ ಎಲ್ಲ ಅಂಶಗಳು ವಿಜೇಂದರ್ ಸಿಂಗ್ ಅವರನ್ನು ಅನುಮಾನದಿಂದ ನೋಡುವಂತೆ ಮಾಡಿವೆ.

ಹೀಗಾಗಿ ಪ್ರಕರಣದಿಂದ ತಮಗಾಗುತ್ತಿರುವ ಮುಜುಗರವನ್ನು ತಡೆಯಲು ವಿಜೇಂದರ್, ನಾಡಾಗೆ ತಮ್ಮ ಮೂತ್ರ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ವಿಜೇಂದರ್ ಡ್ರಗ್ಸ್ ಸೇವಿಸದಿರುವ ಕುರಿತು ನಾಡಾ ಇಂದು ಸ್ಪಷ್ಟನೆ ನೀಡಿದೆ. ಆದರೆ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ ಬಹುಕೋಟಿ ಮಾದಕ ವಸ್ತು ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಒಂದು ಪ್ರಮಾದದಿಂದ ತಪ್ಪಿಸಿಕೊಂಡಿರುವ ವಿಜೇಂದರ್ ಮುಂದಿರುವ ಮತ್ತೊಂದು ದೊಡ್ಡ ಪ್ರಮಾದದಿಂದ ತಪ್ಪಿಸಿಕೊಳ್ಳುತ್ತಾರೆಯೇ...? ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.