ವಿವಾದಕ್ಕೆ ಕಾರಣವಾದ 'ಬರ್ಡ್ಸ್ 11'

ನವದೆಹಲಿ: ಖ್ಯಾತ ಕ್ರಿಕೆಟ್ ಅಂಪೈರ್ ಡಿಕಿಬರ್ಡ್ ಅವರ 'ಶ್ರೇಷ್ಟ ಟೆಸ್ಟ್ ತಂಡ' 'ಬರ್ಡ್ಸ್ 11' ಇದೀಗ ವಿವಾದಕ್ಕೆ ಗ್ರಾಸವಾಗಿದೆ. ಕ್ರಿಕೆಟ್ ದಂತಕಥೆಗಳಾದ ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಅವರನ್ನು ಕೈ ಬಿಟ್ಟಿರುವುದಕ್ಕೆ ಕ್ರಿಕೆಟ್ ಕ್ಷೇತ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇದೇ ಶುಕ್ರವಾರ ತಮ್ಮ 80ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಡಿಕಿಬರ್ಡ್ ಅವರು, ಇದೇ ಸಮಯದಲ್ಲಿ ತಮ್ಮ 'ಕನಸಿನ ಶ್ರೇಷ್ಟ ಕ್ರಿಕೆಟ್ ತಂಡ'ವನ್ನು ಪ್ರಕಟಿಸಿದ್ದರು. ಆದರೆ ಅವರ ತಂಡದ ಆಯ್ಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಇಂಗ್ಲೆಂಡ್ನ ಮಾಜಿ ಅಂಪೈರ್ ಡಿಕಿಬರ್ಡ್ ಅವರ ಶ್ರೇಷ್ಟ ಕ್ರಿಕೆಟ್ ತಂಡದ ಆಯ್ಕೆ, ಮಾಜಿ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲಿಯೂ ಕ್ರಿಕೆಟ್ ದಂತಕಥೆಗಳಾದ ಸರ್ ಡಾನ್ ಬ್ರಾಡ್ಮನ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ತಂಡದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ, ಮಾಜಿ ಆಟಗಾರರು ಟೀಕಾಪ್ರಹಾರವನ್ನೇ ಹರಿಬಿಟ್ಟಿದ್ದಾರೆ. ಡಿಕಿಬರ್ಡ್ ಅವರ ಶ್ರೇಷ್ಟ ಟೆಸ್ಟ್ ಕ್ರಿಕೆಟ್ ತಂಡ ಪಕ್ಷಪಾತದಿಂದ ಕೂಡಿದ್ದು, ಅಸಮತೋಲನದಿಂದ ಕೂಡಿದೆ ಎಂದು ಮಾಜಿ ಕ್ರಿಕೆಟ್ ಆಟಗಾರರು ಟೀಕಿಸಿದ್ದಾರೆ.
ಬ್ರಾಡ್ಮನ್ ಮತ್ತು ಸಚಿನ್ ಮಾತ್ರವಲ್ಲದೆ ಆಸ್ಟ್ರೇಲಿಯಾ ತಂಡಕ್ಕೆ ಸತತ ಮೂರು ಬಾರಿ ವಿಶ್ವಕಪ್ ದೊರಕಿಸಿಕೊಟ್ಟ ಮಾಜಿ ನಾಯಕ ರಿಕಿಪಾಂಟಿಂಗ್, ಟೆಸ್ಟ್ ಕ್ರಿಕೆಟ್ನ ಇನ್ನಿಂಗ್ಸ್ ಒಂದರಲ್ಲಿ 400ಕ್ಕೂ ಅಧಿಕ ರನ್ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದ, ವೆಸ್ಟ್ ಇಂಡೀಸ್ ತಂಡದ ಬ್ರಯಾನ್ ಲಾರಾ ಅವರನ್ನು ಡಿಕಿಬರ್ಡ್ ಅವರು ಕಡೆಗಣಿಸಿರುವುದು ಕ್ರಿಕೆಟ್ ಲೋಕದ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಆಟಗಾರ ಅಜಿತ್ ವಾಡೇಕರ್ ಅವರು, 'ತಂಡದಲ್ಲಿ ಭಾರತದ ಸುನಿಲ್ ಗಾವಸ್ಕರ್ ಅವರಿಗೆ ಸ್ಥಾನ ನೀಡಿರುವುದು ಸರಿಯಾದ ಆಯ್ಕೆಯಾಗಿದ್ದರೂ, ಸಚಿನ್ ಅವರನ್ನು ತಂಡದಿಂದ ಕೈ ಬಿಟ್ಟಿರುವುದು ತಮಗೆ ಅಚ್ಚರಿಮೂಡಿಸಿದೆ' ಎಂದು ಹೇಳಿದ್ದಾರೆ. 'ಇದೊಂದು ಪಕ್ಷಪಾತದಿಂದ ಕೂಡಿದ ತಂಡವಾಗಿದೆ. ತಂಡದಲ್ಲಿ ಭಾರತದ ಕ್ರಿಕೆಟ್ ದಂತಕತೆ ಸುನೀಲ್ ಗಾವಸ್ಕರ್ ಅವರಿಗೆ ಸ್ಥಾನ ನೀಡಿರಬಹುದು. ಆದರೆ ಡಿಕಿಬರ್ಡ್ ಅವರು, ತಮಗೆ ಸ್ನೇಹಪೂರ್ವಕವಾಗಿದ್ದ ಆಟಗಾರರನ್ನೇ ಆಯ್ಕೆ ಮಾಡಿ ಅದನ್ನೇ ಶ್ರೇಷ್ಟ ತಂಡವೆನ್ನುವುದು ಸರಿಯಲ್ಲ. ಡಿಕಿಬರ್ಡ್ ಅವರ ತಂಡ ನಿಜಕ್ಕೂ ಅಸಮತೋಲನದಿಂದ ಕೂಡಿದೆ ಎಂದು ಅಜಿತ್ ವಾಡೇಕರ್ ಹೇಳಿದ್ದಾರೆ.
ಬ್ರಾಡ್ಮನ್, ಸಚಿನ್ ಇಲ್ಲದ ತಂಡವನ್ನು ಊಹಿಸಲು ಅಸಾಧ್ಯ: ಶಿವಲಾಲ್ ಯಾದವ್
ಬ್ರಾಡ್ಮನ್, ಸಚಿನ್ ಮತ್ತು ಲಾರಾ ರಂತಹ ಆಟಗಾರರನ್ನು ಹೊರತು ಪಡಿಸಿ, ಶ್ರೇಷ್ಟ ಟೆಸ್ಟ್ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿರುವುದು ನನ್ನಿಂದ ಊಹಿಸಲು ಅಸಾಧ್ಯವಾಗುತ್ತಿದೆ ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ ಶಿವಲಾಲ್ ಯಾದವ್ ಹೇಳಿದ್ದಾರೆ.
ಡಿಕಿಬರ್ಡ್ ಅವರ 'ಶ್ರೇಷ್ಟ ಟೆಸ್ಟ್ ಕ್ರಿಕೆಟ್ ತಂಡ'ದ 11 ಆಟಗಾರರ ಪಟ್ಟಿ ಇಂತಿದೆ.
ಇಮ್ರಾನ್ ಖಾನ್ (ನಾಯಕ) (ಪಾಕಿಸ್ತಾನ)
ಅಲನ್ನಾಟ್ (ವಿಕೆಟ್ ಕೀಪರ್) (ಇಂಗ್ಲೆಂಡ್)
ಸುನೀಲ್ ಗಾವಸ್ಕರ್ (ಭಾರತ)
ಬ್ಯಾರಿ ರಿಚರ್ಡ್ಸ್ (ದಕ್ಷಿಣ ಆಫ್ರಿಕಾ)
ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್)
ಗ್ರೇಗ್ ಚಾಪೆಲ್ (ಆಸ್ಟ್ರೇಲಿಯಾ)
ಗಾರ್ಫೀಲ್ಡ್ ಸೋಬರ್ಸ್ (ವೆಸ್ಟ್ ಇಂಡೀಸ್)
ಗ್ರೇಮ್ಪೊಲ್ಲಾಕ್ (ದಕ್ಷಿಣ ಆಫ್ರಿಕಾ)
ಡೆನ್ನಿಸ್ಲಿಲ್ಲಿ (ಆಸ್ಟ್ರೇಲಿಯಾ)
ಶೇನ್ವಾರ್ನ್(ಆಸ್ಟ್ರೇಲಿಯಾ)
ಲ್ಯಾನ್ಸ್ಗಿಬ್ಸ್ (ವೆಸ್ಟ್ ಇಂಡೀಸ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


