ಈಗಿನ ಸುದ್ದಿ

ಅತ್ಯಾಚಾರ: ಬಾಲಕಿಗೆ ಪುನರ್ರಚನಾ ಶಸ್ತ್ರ ಚಿಕಿತ್ಸೆ ಅಗತ್ಯ

Published On :

ನವದೆಹಲಿ: ನೆರೆಮನೆಯಾತನಿಂದಲೇ ಅತ್ಯಾಚಾರಕ್ಕೊಳಗಾದ ದೆಹಲಿಯ 5 ವರ್ಷದ ಪುಟ್ಟ ಬಾಲಕಿಗೆ 'ಅಂಗ ಪುನರ್ರಚನಾ ಶಸ್ತ್ರ ಚಿಕಿತ್ಸೆ' ಮಾಡಬೇಕಿದೆ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ಎಐಐಎಂಎಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಖಿಲ ಭಾರತ ವೈಧ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಆಸ್ಪತ್ರೆಯ ಹಿರಿಯ ವೈದ್ಯ ಡಾ.ಡಿ.ಕೆ.ಶರ್ಮಾ ಅವರು, ಬಾಲಕಿಯ ಗುಪ್ತಾಂಗದಲ್ಲಿ ಕೆಲ ಗಂಭೀರ ಗಾಯಗಳಾಗಿದ್ದು, ಆಕೆಗೆ ಅಂಗ ಪುನರ್ರಚನಾ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ. ಬಾಲಕಿಯು ಪ್ರಜ್ಞೆಯಲ್ಲಿದ್ದು, ತನ್ನ ಪೋಷಕರೊಂದಿಗೆ ಮಾತನಾಡುತ್ತಿದ್ದಾಳೆ. ಆಕೆಯ ಆರೋಗ್ಯ ಸ್ಥಿರವಾಗಿದೆ. ಬಾಲಕಿಗೆ ದ್ರವಾಹಾರಗಳನ್ನು ಮಾತ್ರ ನೀಡಲಾಗುತ್ತಿದ್ದು, ಇನ್ನೂ ಎರಡು ದಿನ ಆಕೆಯನ್ನು ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಆಕೆಯ ಶಸ್ತ್ರ ಚಿಕಿತ್ಸೆ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಶರ್ಮಾ ಅವರು, ಆಕೆಯನ್ನು ಶೀಘ್ರದಲ್ಲಿಯೇ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಿದ್ದು, ಶಸ್ತ್ರ ಚಿಕಿತ್ಸೆಯನ್ನು ರಾತ್ರಿ ವೇಳೆಯಲ್ಲಿ ನಡೆಸುತ್ತೇವೆ ಎಂದು ತಿಳಿಸಿದರು.

ನಿನ್ನೆ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರು, ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯವನ್ನು ವಿಚಾರಿಸಿದ್ದರು. ಅಲ್ಲದೆ ಬಾಲಕಿಗೆ ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದರು. ಹೀಗಾಗಿ ಎಐಐಎಂಎಸ್ ಆಸ್ಪತ್ರೆಯ ವಿವಿಧ ವಿಭಾಗಗಳ ಒಟ್ಟು 8 ಮಂದಿ ನುರಿತ ವೈದ್ಯರ ತಂಡ ಬಾಲಕಿಗೆ ಚಿಕಿತ್ಸೆ ನೀಡುತ್ತಿದೆ.

ಕಳೆದ ಸೋಮವಾರ ದಕ್ಷಿಣ ದೆಹಲಿಯ ಗಾಂಧಿನಗರದಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ನೆರೆಮನೆಯಲ್ಲಿದ್ದ ಮನೋಜ್ ಕುಮಾರ್ ಎಂಬಾತ ಅಪಹರಿಸಿ, ತಾನು ನೆಲೆಸಿದ್ದ ಗಾಂಧಿನಗರದ ಅಪಾರ್ಟ್‌ಮೆಂಟ್‌ನ ನೆಲಮಹಡಿಯ ಕೊಠಡಿಯಲ್ಲಿ ಕೂಡಿಹಾಕಿದ್ದನು. ಬಾಲಕಿಗೆ ಆಹಾರ ಮತ್ತು ನೀರನ್ನು ನೀಡದೆ ಸತತ 2 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದನು. ಬುಧವಾರ ಆತನಿಂದ ತಪ್ಪಿಸಿಕೊಂಡಿದ್ದ ಬಾಲಕಿ ಕೂಗಿಕೊಳ್ಳುತ್ತಾ ಹೊರಗೆ ಓಡಿ ಬಂದಿದ್ದಳು.

ನಂತರ ಬಾಲಕಿಯನ್ನು ಗಮನಿಸಿದ ಪೋಷಕರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ನಂತರ ಆರೋಪಿ ಮನೋಜ್ ಕುಮಾರ್ ಬಿಹಾರದ ಮುಜಾಫರ್ ಜಿಲ್ಲೆಯ ತನ್ನ ಸ್ವಗ್ರಾಮಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದನು. ಇಂದು ಬೆಳಗ್ಗೆ ದೆಹಲಿ ಪೊಲೀಸರು, ಬಿಹಾರ ಪೊಲೀಸರ ಸಹಾಯ ಪಡೆದು ಆತನನ್ನು ಬಂಧಿಸಿ ದೆಹಲಿಗೆ ಕರೆ ತಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.