ಮುಷರ್ರಫ್‌ಗೆ ಮೇ 4ರವರೆಗೆ ನ್ಯಾಯಾಂಗ ಬಂಧನ
ಇಸ್ಲಾಮಾಬಾದ್: ನ್ಯಾಯಾಧೀಶರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಅವರನ್ನು ಮೇ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
2007ರಲ್ಲಿ ಸಂವಿಧಾನವನ್ನು ಅಮಾನತಿನಲ್ಲಿಟ್ಟು, ಪಾಕಿಸ್ತಾನದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದ ಮತ್ತು ಇದಕ್ಕಾಗಿ ತಮಗೆ ಬೇಕಾದ ನ್ಯಾಯಾಧೀಶರನ್ನು ಅಕ್ರಮವಾಗಿ ನೇಮಿಸಿಕೊಂಡ ಆರೋಪದ ಮೇಲೆ ಬಂಧಿತರಾಗಿರುವ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಅವರನ್ನು ಇಸ್ಲಾಮಾಬಾದ್ ವಿಶೇಷ ನ್ಯಾಯಾಲಯ ಮೇ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇಸ್ಲಾಮಾಬಾದಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ಖೌಸರ್ ಅಬ್ಬಾಸ್ ಜೈದಿ ಅವರು ಮುಷರ್ರಫ್ ಪ್ರಕರಣವನ್ನು ಇಂದು ವಿಚಾರಣೆ ನಡೆಸಿ, 69 ವರ್ಷದ ಪಾಕ್ ಮಾಜಿ ಅಧ್ಯಕ್ಷ ಮುಷರ್ರಫ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆದರೆ ನ್ಯಾಯಾಲಯದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮುಷರ್ರಫ್ ಪರ ವಕೀಲ ಖಾಮರ್ ಅಫ್ಜಲ್ ಅವರು, ಭದ್ರತಾ ಕಾರಣಗಳಿಂದ ಮುಷರ್ರಫ್ ಅವರನ್ನು ದೀರ್ಘ ಸಮಯ ಬಂಧನದಲ್ಲಿಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನ್ಯಾಯಾಲಯದ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
'ಮುಷರ್ರಫ್ ಅವರ ಬಂಧನದಲ್ಲಿ ರಾಜಕೀಯ ಪ್ರೇರಿತ ಷಡ್ಯಂತ್ರವಿದ್ದು, ಪ್ರಕರಣವನ್ನು ಮತ್ತೆ ಮೊದಲಿನಿಂದ ತನಿಖೆಗೊಳಪಡಿಸುವಂತೆ ಸುಪ್ರೀಂಕೋರ್ಟ್‌ನಲ್ಲಿ ಕೋರಲಾಗುವುದು' ಎಂದು ಮುಷರ್ರಫ್ ಪರ ವಕೀಲ ಖಾಮರ್ ಅಫ್ಜಲ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

