ಈಗಿನ ಸುದ್ದಿ

ಗೋವಾ ಬೀಚ್‌ಗಳಲ್ಲಿ ಮದ್ಯಪಾನ ನಿಷೇಧ

ಗೋವಾ ಬೀಚ್‌ಗಳಲ್ಲಿ ಮದ್ಯಪಾನ ನಿಷೇಧ
Published On :

ಪಣಜಿ: ಗೋವಾ ರಾಜ್ಯದ ಎಲ್ಲಾ ಕಡಲತೀರಗಳಲ್ಲಿ ಇನ್ನು ಮುಂದೆ ಮದ್ಯಪಾನ ಮಾಡುವಂತಿಲ್ಲ ಎಂದು ಗೋವಾ ಪ್ರವಾಸೋದ್ಯಮ ಇಲಾಖೆ ಆದೇಶಿಸಿದೆ.

ಸ್ವಚ್ಛತೆ ಮತ್ತು ಮಹಿಳೆಯರ ಸುರಕ್ಷತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಗೋವಾ ಪ್ರವಾಸೋದ್ಯಮ ಇಲಾಖೆಯು ಕಡಲತೀರಗಳಲ್ಲಿ ಮದ್ಯಪಾನ ನಿಷೇಧಿಸಿದೆ. ಇದಕ್ಕಾಗಿ ಗೋವಾದ ಎಲ್ಲಾ ಬೀಚ್‌ಗಳಲ್ಲಿ ಇಂಡಿಯನ್ ರಿಸರ್ವ್ ಬೆಟಾಲಿಯನ್(ಐಆರ್‌ಬಿ) ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಬೀಚ್‌ಗಳಲ್ಲಿ ಮದ್ಯ ಸೇವಿಸುವವರನ್ನು ಯಾವುದೇ ಮುಲಾಜಿಲ್ಲದೆ ಐಆರ್‌ಬಿ ಸಿಬ್ಬಂದಿಗಳು ಬಂಧಿಸುತ್ತಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೋವಾ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ನಿಖಿಲ್ ದೇಸಾಯಿ ಅವರು, ಪ್ರವಾಸೋದ್ಯಮ ಪ್ರದೇಶಗಳ ರಕ್ಷಣೆ, ಅಭಿವೃದ್ಧಿ ಮತ್ತು ಪ್ರವಾಸಿಗರ ರಕ್ಷಣೆಯ ಆದ್ಯತೆಯ ಮೇರೆಗೆ ಪ್ರವಾಸೋದ್ಯಮ ಕಾಯ್ದೆಯಡಿ ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ಕೇವಲ ಬೀಚ್‌ಗಳಲ್ಲಿ ಮಾತ್ರ ಮದ್ಯಕ್ಕೆ ನಿಷೇಧವಿದ್ದು, ಇತರೆ ಪ್ರದೇಶಗಳಲ್ಲಿ ಮತ್ತು ವ್ಯಾಪಾರಿ ಕೇಂದ್ರಗಳಲ್ಲಿ ಮದ್ಯಪಾನ ಮಾಡಬಹುದು ಎಂದು ನಿಖಿಲ್ ದೇಸಾಯಿ ಅವರು ಸ್ಪಷ್ಟಪಡಿಸಿದ್ದಾರೆ.

ಗೋವಾದ ಬೀಚ್‌ಗಳಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಕಸದ ರಾಶಿ ಮತ್ತು ಎಲ್ಲೆಂದರಲ್ಲಿ ಕುಡಿದು ಬಿಸಾಡುವ ಮದ್ಯದ ಬಾಟಲಿಯಿಂದಾಗಿ ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಅಲ್ಲದೆ ಪಾನಮತ್ತ ಯುವಕರು ಬೀಚ್‌ಗೆ ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಕುರಿತು ಇಲಾಖೆಗೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಗೋವಾ ಪ್ರವಾಸೋದ್ಯಮ ಇಲಾಖೆ ಕಡಲತೀರಗಳಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಿದೆ.

ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿರುವ ಗೋವಾದ ಬೀಚ್‌ಗಳಿಗೆ ಪ್ರತಿ ವರ್ಷ ಸುಮಾರು 2.4 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಗೋವಾದ ಪ್ರಮುಖ ಆದಾಯದ ಮೂಲವಾಗಿರುವ ಪ್ರವಾಸೋಧ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.