ಈಗಿನ ಸುದ್ದಿ

ಪಾಕ್ ಸೈನಿಕರಿಂದಲೇ ಐವರು ಯೋಧರ ಹತ್ಯೆ: ಆಂಟನಿ

ಪಾಕ್ ಸೈನಿಕರಿಂದಲೇ ಐವರು ಯೋಧರ ಹತ್ಯೆ: ಆಂಟನಿ
Published On :

ನವದೆಹಲಿ: ಭಾರತೀಯ ಐವರು ಯೋಧರ ಹತ್ಯೆ ಮಾಡಿರುವುದು ಪಾಕ್ ಸೈನಿಕರೇ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಆಂಟನಿ ಅವರು ದುರ್ಬಲ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಿನ್ನೆ ಉಭಯ ಸದನಗಳಲ್ಲಿ ಆಂಟನಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು, ಇದರಿಂದಾಗಿ ಉಭಯ ಸದನಗಳ ಕಲಾಪಕ್ಕೆ ಅಡ್ಡಿಯುಂಟಾಗಿತ್ತು. ವಿರೋಧಪಕ್ಷಗಳ ಆರೋಪಕ್ಕೆ ಮಣಿದ ಆಂಟನಿ ಅವರು ತಮ್ಮ ಅಸಂಬದ್ಧ ಹೇಳಿಕೆಯನ್ನು ಇಂದು ತಿದ್ದಿಕೊಂಡಿದ್ದಾರೆ.

ಇಂದು ಸದನದಲ್ಲಿ ಮಾತನಾಡಿದ ಆಂಟನಿ ಅವರು, ಪಾಕ್ ಸೈನಿಕರಿಂದಲೇ ಭಾರತೀಯ ಯೋಧರ ಹತ್ಯೆಯಾಗಿದೆ. ದಾಳಿಯಲ್ಲಿ ಪಾಕ್ ಸೈನಿಕರು ನೇರವಾಗಿ ಪಾಲ್ಗೊಂಡಿದ್ದು, ಗಡಿ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಭಾರತೀಯ ಯೋಧರನ್ನು ಸುತ್ತುವರೆದು ದಾಳಿ ನಡೆಸಿದ್ದಾರೆ. ದಾಳಿಗೆ ಸಂಬಂಧಿಸಿದಂತೆ ಪಾಕ್ ಸೈನಿಕರು ಪೂರ್ವಸಿದ್ಧತೆ ಮಾಡಿಕೊಂಡು ದಿಢೀರ್ ದಾಳಿ ನಡೆಸಿದ್ದಾರೆ. ಇದರಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಯೋಧರನ್ನು ಪಾಕ್ ಸಮವಸ್ತ್ರ ಧರಿಸಿದ್ದ ಭಯೋತ್ಪಾದಕರು ದಾಳಿ ಮಾಡಿ ಹತ್ಯೆ ಮಾಡಿದ್ದರು ಎಂದು ಮಂಗಳವಾರ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದ ಆಂಟನಿ, ಇದೀಗ ತಮ್ಮ ತಪ್ಪನ್ನು ತಿದ್ದಿಕೊಂಡು ದಾಳಿಯ ಕುರಿತಾಗಿ ತಮಗೆ ತಕ್ಷಣಕ್ಕೆ ಸಿಕ್ಕ ಮಾಹಿತಿ ಅನ್ವಯ ನಾನು ಹೇಳಿಕೆ ನೀಡಿದ್ದೆ ಎಂದು ಹೇಳಿದ್ದಾರೆ.

ಆಂಟನಿ ಅವರ ಹೇಳಿಕೆ ವಿಪಕ್ಷಗಳ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ ಅವರು ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ಬಿಜೆಪಿ ಬುಧವಾರ ಆಗ್ರಹಿಸಿತ್ತು.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಎಂಬಲ್ಲಿ ಸೋಮವಾರ ರಾತ್ರಿ ಭಾರತದ ಗಸ್ತು ಪಡೆಯ ಮೇಲೆ ಪಾಕಿಸ್ಥಾನ ಸೈನಿಕರು ಗುಂಡಿನ ದಾಳಿ ನಡೆಸಿ ಐವರು ಭಾರತೀಯ ಯೋಧರನ್ನು ಹತ್ಯೆಗೈದಿದ್ದರು. ದಾಳಿಯಲ್ಲಿ ಬಿಹಾರದ 21 ಯುನಿಟ್‌ನ ಸುಬೇದಾರ್ ಮತ್ತು ನಾಲ್ವರು ಯೋಧರು ಹುತಾತ್ಮರಾಗಿದ್ದರು. ಮೃತಪಟ್ಟವರಲ್ಲಿ ಬೆಳಗಾವಿಯಲ್ಲಿರುವ ಮರಾಠ ರೆಜಿಮೆಂಟ್‌ನ ಒಬ್ಬ ಯೋಧ ಕೂಡ ಸೇರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.