ಈಗಿನ ಸುದ್ದಿ

ನರಭಕ್ಷಕ ಹುಲಿ ಜೀವಂತ ಸೆರೆ

ನರಭಕ್ಷಕ ಹುಲಿ ಜೀವಂತ ಸೆರೆ
Published On :

ಮೈಸೂರು: ಒಂದು ವಾರದಲ್ಲಿ ನಾಲ್ವರನ್ನು ಬಲಿ ಪಡೆದ ನರಭಕ್ಷಕ ಹುಲಿ ಗುರುವಾರ ಜೀವಂತವಾಗಿ ಸೇರೆ ಸಿಕ್ಕಿದೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಚಿಕ್ಕಬರಗಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಂದು ಮಧ್ಯಾಹ್ನ ನರಭಕ್ಷಕ ಹುಲಿಯನ್ನು ಜೀವಂತವಾಗಿ ಸೇರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ನಿನ್ನೆ ಈ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಹುಲಿಗಾಗಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು.

ಚಿಕ್ಕಬರಗಿ ಅರಣ್ಯ ಪ್ರದೇಶದಲ್ಲಿ ಹುಲಿ ಇರುವ ಬಗ್ಗೆ ನಿನ್ನೆಯೇ ಮಾಹಿತಿ ದೊರೆತಿತ್ತು. ಖಚಿತ ಮಾಹಿತಿ ಆಧರಿಸಿ ಇಂದು ಸಹ ಕಾರ್ಯಾಚರಣೆ ಮುಂದುವರೆಸಿದ್ದ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ವ್ಯಾಘ್ರನನ್ನು ಜೀವಂತವಾಗಿ ಸೇರೆ ಹಿಡಿದಿದ್ದಾರೆ.

ಕಾರ್ಯಾಚರಣೆಯ ಬಳಿಕ ಮಾಧ್ಯಮಕ್ಕೆ ಮಾತಾಡಿರುವ ಡಾ. ಸನತ್ ಅವರು, ಹುಲಿಯ ಮೇಲೆ ಮೂರು ಸುತ್ತು ಅರವಳಿಕೆ ಮದ್ದು ಫೈರ್ ಮಾಡಲಾಯಿತು. 1 ಚುಚ್ಚುಮದ್ದು ತಗುಲಿದ ಬಳಿಕ ಹುಲಿ ಮಂಕಾಯಿತು. ನಂತರ ಹುಲಿ ಸಂಪೂರ್ಣವಾಗಿ ನಿಷ್ಕ್ರಿಯವಾದ ಬಳಿಕ ಅದನ್ನು ಸೆರೆ ಹಿಡಿಯಲಾಯಿತು ಎಂದು ತಿಳಿಸಿದ್ದಾರೆ.

ಸೆರೆ ಸಿಕ್ಕ ವ್ಯಾಘ್ರನನ್ನು ಮೈಸೂರು ಮೃಗಾಲಯಕ್ಕೆ ರವಾನೆ ಮಾಡುವ ಸಾಧ್ಯತೆ ಇದೆ.

ಈ ಮಧ್ಯೆ, ಚಿಕ್ಕಬರಗಿ ಗ್ರಾಮಸ್ಥರು, ನಮ್ಮ ಕಣ್ಣೆದುರಿಗೆ ಆ ನರಭಕ್ಷಕ ಹುಲಿಯನ್ನು ಸಾಯಿಸುವಂತೆ ಅರಣ್ಯ ಸಿಬ್ಬಂದಿಗೆ ಒತ್ತಾಯಿಸಿದ್ದಾರೆ. ಅಲ್ಲದೆ, ನೀವು ಸಾಯಿಸದಿದ್ದರೆ ನಾವೇ ಅದನ್ನು ಸಾಯಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ರಾತ್ರಿಯಿಂದಲೆ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಪೊಲೀಸರು ಬುಧವಾರ ಬೆಳಗ್ಗೆಯಿಂದ ಹುಲಿಯ ಬೇಟೆಗೆ ಮುಂದಾದರು. ನಂಜನಗೂಡು ತಾಲೂಕು ಹೆಡಿಯಾಲ ಅರಣ್ಯ ವ್ಯಾಪ್ತಿಯಲ್ಲಿ ಅಡಗಿರಬಹುದು ಎನ್ನುವ ಸಂಶಯದಿಂದ ಆ ಭಾಗದಲ್ಲಿ ಹುಲಿಯ ಶೋಧನೆ ಕಾರ್ಯ ಆರಂಭಿಸಿದರು. ಸಾಕಾನೆಗಳ ಮೂಲಕ ಕಾಡು ಪ್ರವೇಶಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯ ಹೆಜ್ಜೆ ಗುರುತಿನ ಆಧಾರದ ಮೇಲೆ ಹುಲಿಯ ಇರುವುದನ್ನು ಮೊದಲು ಖಚಿತಪಡಿಸಿಕೊಂಡರು. ನಂತರ 29 ಸುತ್ತು ಗುಂಡು ಹಾರಿಸಿದರಾದರೂ ಹುಲಿಯ ಚಿತ್ಕಾರವಾಗಲಿ, ಗರ್ಜನೆಯಾಗಲಿ ಕೇಳಿ ಬಾರದ ಹಿನ್ನೆಲೆಯಲ್ಲಿ ಒಳಗಡೆ ಪ್ರವೇಶಿಸುವ ಪ್ರಯತ್ನ ಮಾಡಲಿಲ್ಲ. ಹುಲಿ ಬದುಕಿದ್ದರೆ ಕಾಡಿನಿಂದ ಹೊರ ಬರಬಹುದು ಎಂಬ ಸಂಶಯದೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

ಕಳೆದ ನ.27ರಂದು ನರಭಕ್ಷಕ ಹುಲಿಯ ದಾಳಿಗೆ ಎಚ್.ಡಿ. ಕೋಟೆ ತಾಲೂಕು ನಡಹಾಡಿ ಗ್ರಾಮದ ಬಸವರಾಜು ಎಂಬವರು ಬಲಿಯಾಗಿದ್ದರು. ಅಂದು ಅಕ್ಕಪಕ್ಕದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.              

ಇದಾದ 2 ದಿನಗಳಲ್ಲಿ ನ.29 ರಂದು ಸೀಗೆವಾಡಿ ಹಾಡಿಯ ಚಲುವ (40) ಎಂಬಾತನನ್ನು ನರಭಕ್ಷಕ ಹುಲಿ ಬಲಿ ತೆಗೆದುಕೊಂಡಿತ್ತು. ಅಲ್ಲದೆ ಇದೆ ಪ್ರಕರಣದಲ್ಲಿ ಚಿಕ್ಕ ಎಂಬಾತ ಕೂಡ ಗಾಯಗೊಂಡಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.