ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಧಿವಶ

ಬೆಂಗಳೂರು: ಮೈಸೂರು ರಾಜವಂಶಸ್ಥ, ಮಾಜಿ ಸಂಸದ, ಕೆಎಸ್ಸಿಎ ಅಧ್ಯಕ್ಷ ಶ್ರೀಕಂಠದತ್ತ ನರಸಿಂಹರಾಜ ಒಡೆಯವರು ಅವರು ತೀವ್ರ ಹೃದಯಾಘಾತದಿಂದ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.
60 ವರ್ಷದ ಒಡೆಯರ್ ಅವರು ಇಂದು ಮಧ್ಯಾಹ್ನ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಸದ್ಯ ಒಡೆಯರ್ ಪಾರ್ಥಿವ ಶರೀರ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದು, ಶರೀರವನ್ನು ಯಾರೂ ಮುಟ್ಟದಂತೆ ಸೂಚಿಸಲಾಗಿದೆ.
1953ರ ಫೆಬ್ರುವರಿ 20ರಂದು ಜನಸಿದ್ದ ಒಡೆಯರ್ ಅವರು ಮೈಸೂರಿನ ಕೊನೆಯ ಅರಸರಾಗಿದ್ದು, ಅವರು ತಮ್ಮ ಪತ್ನಿ ಪ್ರಮೋದಾ ದೇವಿ ಅವರನ್ನು ಅಗಲಿದ್ದಾರೆ. 1976ರ ಫೆಬ್ರವರಿ 2 ರಂದು ಪ್ರಮೋದಾ ದೇವಿ ಅವರನ್ನು ಮದುವೆಯಾಗಿದ್ದರು.
ಬೆಂಗಳೂರಿನ ಅರಮನೆಯಲ್ಲಿದ್ದ ಒಡೆಯರ್ ಅವರು ಇಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಅರಮನೆ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಒಂದು ತಿಂಗಳ ಹಿಂದಷ್ಟೆ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಒಡೆಯರ್ ಅವರು, ಬೊಜ್ಜು ಕರಗಿಸಲು ವಿಶೇಷ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.
ಇತ್ತೀಚೆಗಷ್ಟೆ ಕೆಎಸ್ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಒಡೆಯರ್ ಮೈಸೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದರು.
1399ರಿಂದ 1950ರವರೆಗೂ ಒಡೆಯರ್ ವಂಶ ಮೈಸೂರು ಸಂಸ್ಥಾನದಲ್ಲಿ ಆಡಳಿತ ನಡೆಸುತ್ತಿತ್ತು. 1974ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸಾಂಪ್ರದಾಯಿಕವಾಗಿ ಮಹಾರಾಜ ಪಟ್ಟ ಅಲಂಕರಿಸಿದ್ದರು.
ನಾಳೆ ಮನುವನದಲ್ಲಿ ಅಂತ್ಯಕ್ರಿಯೆ
ಮೈಸೂರಿನ ಜೆಎಸ್ಎಸ್ ಕಾಲೇಜ್ ಬಳಿ ಇರುವ ಮೈಸೂರು ರಾಜವಂಶಸ್ಥರ ಸ್ಮಶಾನ ಭೂಮಿ ಮನುವನದಲ್ಲಿ ಯದು ವಂಶದ ಕೊನೆಯ ರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.
ಮೈಸೂರು ಮಹಾರಾಜ ನಡೆದು ಬಂದ ಹಾದಿ...
1953ರ ಫೆಬ್ರುವರಿ 20ರಂದು ಮೈಸೂರಿನಲ್ಲಿ ಜನನ
ತಂದೆ ಜಯಚಾಮರಾಜೇಂದ್ರ ಒಡೆಯರ್, ತಾಯಿ ತ್ರಿಪುರ ಸುಂದರಿ ಅಮ್ಮಣಿ
1974ರಲ್ಲಿ ಮಹಾರಾಜ ಸ್ಥಾನ ಅಲಂಕಾರ
1976, ಫೆಬ್ರುವರಿ 2ರಂದು ಪ್ರಮೋದಾದೇವಿ ಅವರೊಂದಿಗೆ ಮದುವೆ
ಮೈಸೂರು ವಿವಿಯಿಂದ ರಾಜ್ಯಶಾಸ್ತ್ರ ಹಾಗೂ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ
ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆ
ಇದೇ ಡಿಸೆಂಬರ್ 1ರಂದು ಕೆಎಸ್ಸಿಎ ಅಧ್ಯಕ್ಷರಾಗಿ ಆಯ್ಕೆ
ಒಡೆಯರ್ ಎಲ್ಲಾ ಕಾರ್ಗಳ ನಂ.1953, (1953 ಒಡೆಯರ್ ಹುಟ್ಟಿದ ವರ್ಷ)
ಶ್ರೀಕಂಠದತ್ತರನ್ನು ನನ್ನ ಮೊಮ್ಮಗನೆಂದೆ ಭಾವಿಸಿದ್ದೆ: ಪ್ರೊ.ನಂಜರಾಜೇ ಅರಸ್
ಮಹಾರಾಜನ ಸಾವಿನ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪ್ರೊ.ನಂಜೆರಾಜ್ ಅರಸ್ ಅವರು, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ನ್ನು ನನ್ನ ಮೊಮ್ಮಗನೆಂದು ಭಾವಿಸಿದ್ದೆ. ದಸರಾ ವೇಳೆ ಅವರ ಆರೋಗ್ಯ ಚೆನ್ನಾಗಿಯೇ ಇತ್ತು. 10 ದಿನಗಳ ಹಿಂದೆ ಬೆಂಗಳೂರಿನ ಅರಮನೆಯಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರ ನಿಧನದಿಂದ ನನಗೆ ಅಪಾರ ದುಃಖವಾಗಿದೆ ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


