ಯದುವಂಶದ ಕೊನೆಯ ಕುಡಿ ಪಂಚಭೂತಗಳಲ್ಲಿ ಲೀನ

ಮೈಸೂರು: ಮೈಸೂರು ರಾಜವಂಶಸ್ಥ, ಯದುವಂಶದ ಕೊನೆಯ ಕುಡಿ, ಮಾಜಿ ಸಂಸದ ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಬುಧವಾರ ಮಧ್ಯಾಹ್ನ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ನಿನ್ನೆ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘತದಿಂದ ನಿಧನರಾಗಿದ್ದ ಒಡೆಯರ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಂಜನಗೂಡು ರಸ್ತೆಯಲ್ಲಿರುವ ರಾಜವಂಶಸ್ಥರ ರುದ್ರಭೂಮಿ ಮನುವನದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಅಂತ್ಯಕ್ರಿಯೆಯಲ್ಲಿ ಒಡೆಯರ್ ಕುಟುಂಬ ವರ್ಗ ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು.
ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಬೆಳ್ಳಿ ಪಲ್ಲಕ್ಕಿಯಲ್ಲಿ ಒಡೆಯರ್ ಮೃತದೇಹವನ್ನು ಮೆರವಣಿಗೆಯೊಂದಿಗೆ ಮೈಸೂರಿನ ಪ್ರಮುಖ ರಸ್ತೆಗಳ ಮೂಲಕ ಮನುವನಕ್ಕೆ ತರಲಾಗಿತ್ತು. ನಂತರ ಅರಮನೆ ಪುರೋಹಿತರಾದ ಜನಾರ್ದನ, ನರಸಿಂಹಶಾಸ್ತ್ರಿ, ಮಂಜುನಾಥ ಶರ್ಮಾ, ಶ್ರೀಹರಿ ಹಾಗೂ ಭಾನುಪ್ರಕಾಶ್ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ಶ್ರೀವೈಷ್ಣವ ಸಂಪ್ರದಾಯದ ಪ್ರಕಾರ ಪುರೋಹಿತರಿಂದ ವೇದಮಂತ್ರ ಘೋಷಣೆ, ತಿಲಪಾತ್ರದಾನ, ಪೈತ್ರಿವೇದಿಕ ಹೋಮ ಹವನಗಳು ಹಾಗೂ ಕುಂಭ ಪ್ರದಕ್ಷಿಣೆ ನಡೆಯಿತು. ಬಳಿಕ ಒಡೆಯರ್ ಅವರ ಸಹೋದರಿ ಗಾಯತ್ರಿದೇವಿ ಅವರ ಪುತ್ರ ಕಾಂತರಾಜ್ ಅರಸ್ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ಮೂರು ಸುತ್ತು ಕುಶಲತೋಪು ಹಾರಿಸಿ ಒಡರೆಯರ್‌ಗೆ ಗೌರವ ಸೂಚಿಸಲಾಯಿತು. ಅಂತ್ಯಕ್ರಿಯೆಗೆ 250ಕೆ.ಜೆ.ಶ್ರೀಗಂಧ ಹಾಗೂ ವಿವಿಧ ಸುಂಗಂಧ ದ್ರವ್ಯಗಳನ್ನು ಬಳಸಲಾಗಿತ್ತು.
ಈ ಮುಂಚೆ ಪಾರ್ಥಿವ ಶರೀರಕ್ಕೆ ಸಪ್ತನದಿಗಳ ಜಲಾಭಿಷೇಕ ಮಾಡಿಸಿ, ಬಳಿಕ ಪಂಚದ್ರವ್ಯಗಳಿಂದ ಅಭಿಷೇಕ ಮಾಡಲಾಗಿತ್ತು. ಚಾಮುಂಡಿಬೆಟ್ಟ, ಪರಕಾಲಮಠ ಸೇರಿದಂತೆ ಐದು ದೇವಸ್ಥಾನಗಳಿಂದ ಒಡೆಯರ್ ಹೆಸರಿನಲ್ಲಿ ಮಾಡಿಸಲಾದ ವಿಶೇಷ ಪೂಜೆಯ ಪ್ರಸಾದ ಸಹ ತರಲಾಗಿತ್ತು.
ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಚಿವರಾದ ಕೆ.ಜೆ.ಜಾರ್ಜ್, ವಿ.ಶ್ರೀನಿವಾಸ್ ಪ್ರಸಾದ್, ಅಂಬರೀಷ್, ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


