ಅಡಿಕೆ ನಿಷೇಧ ಮಾಡ್ಬೇಡಿ: ಕೇಂದ್ರ ಸಚಿವರಿಗೆ ಸಿಎಂ ಮನವಿ

ನವದೆಹಲಿ: ರಾಜ್ಯದಲ್ಲಿ ಅಡಿಕೆ ನಿಷೇಧ ಮಾಡಬೇಡಿ ಎಂದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಆಜಾದ್ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಐದು ಲಕ್ಷ ಕುಟುಂಬಗಳು ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿವೆ. ಹೀಗಾಗಿ ಅಡಿಕೆ ನಿಷೇಧ ಮಾಡ್ಬೇಡಿ ಅಂತ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಅವರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಅಡಿಕೆಯಲ್ಲಿ ಔಷಧೀಯ ಗುಣಗಳಿವೆ. ಅಡಿಕೆ ಆರೋಗ್ಯಕ್ಕೆ ಹಾನಿಕರ ಅಲ್ಲ ಎಂದು ಆಜಾದ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸದ್ಯ ಅಡಿಕೆ ನಿಷೇಧ ಮಾಡುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ ಮತ್ತು ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರ್ಕಾರ ಯಾವುದೇ ಅಫಿಡವಿಟ್ ಸಲ್ಲಿಸಿಲ್ಲ. ಬರೀ ಮೌಖಿಕವಾಗಿ ಕೋರ್ಟ್ನಲ್ಲಿ ಪ್ರಸ್ತಾಪವಾಗಿದೆ ಎಂದು ಸಿಎಂ ಹೇಳಿದರು.
ಆರೋಗ್ಯಕ್ಕೆ ಹಾನಿಕರ ಪದಾರ್ಥಗಳ ನಿಷೇಧ ಕುರಿತ ಪ್ರಕರಣ 2007ರಿಂದಲೇ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಅದರ ಅಂತಿಮ ತೀರ್ಪು ಇನ್ನೂ ಹೊರಬಂದಿಲ್ಲ. ಆರೋಗ್ಯಕ್ಕೆ ಹಾನಿಕರವಾದ ಗುಟ್ಕಾ ನಿಷೇಧಿಸುವಂತೆ ಸುಪ್ರೀಂ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ಅದರಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಗುಟ್ಕಾ ನಿಷೇಧಿಸಿವೆ. ಹಾನಿಕಾರಕ ಪದಾರ್ಥ ನಿಷೇಧ ಪರಿಶೀಲನೆ ಮುಂದುವರಿಸಿದ ಕೇಂದ್ರ ಈಗ ತಿನ್ನಲು, ಜಗಿಯಲು ಬಳಕೆ ಮಾಡುವ ಅಡಕೆಯತ್ತ ವಕ್ರದೃಷ್ಟಿ ಹರಿಸಿದೆ. ಇದರ ಪರಿಣಾಮ ಅಡಕೆಯನ್ನೇ ನಿಷೇಧಿಸುವಂತೆ ಕೋರಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸುಪ್ರೀಂ ಕೋರ್ಟ್ಗೆ ನ.25ರಂದು ಲಿಖಿತ ಮೇಲ್ಮನವಿ ಸಲ್ಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿ ಪ್ರಕಟವಾಗುತ್ತಿದ್ದಂತೆ ಕೇಂದ್ರದ ನಿರ್ಧಾರಕ್ಕೆ ಅಡಿಕೆ ಬೆಳೆಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


