2014 ಲೋಕಸಭಾ ಚುನಾವಣೆ: ಡಿಎಂಕೆ ಏಕಾಂಗಿಯಾಗಿ ಸ್ಪರ್ಧೆ
ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ತಮಿಳ್ನಾಡಿನಲ್ಲಿನ ಎಲ್ಲ ಪ್ರಧಾನ ರಾಜಕೀಯ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧೆಗಿಳಿಯಲಿವೆ.
ಕೇಂದ್ರದಲ್ಲಿ 10 ವರ್ಷಗಳ ಕಾಲ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿಕೊಂಡಿದ್ದ ಡಿಎಂಕೆ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆಗಿಳಿಯುವುದಾಗಿ ಘೋಷಿಸಿದೆ. ಅದೇ ವೇಳೆ ತಾವು ಬಿಜೆಪಿಯೊಂದಿಗೂ ಮೈತ್ರಿ ಹೊಂದಲ್ಲ ಎಂದು ಡಿಎಂಕೆ ಪಕ್ಷ ಹೇಳಿದೆ.
ಆದಾಗ್ಯೂ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಾವಧಿ ಮುಗಿದಂದಿನಿಂದಲೇ ಬಿಜೆಪಿ ಜತೆಗಿನ ನಮ್ಮ ಮೈತ್ರಿ ಮುಗಿದಿದೆ ಎಂದು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಹೇಳಿದ್ದಾರೆ.
ಶ್ರೀಲಂಕಾದಲ್ಲಿನ ತಮಿಳರ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ಮುತವರ್ಜಿ ವಹಿಸುವುದಿಲ್ಲ ಎಂಬ ಕಾರಣವೊಡ್ಡಿ ಡಿಎಂಕೆ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮಾಡುತ್ತಲೇ ಇದೆ. ಆದರೆ 2 ಜಿ ಹಗರಣದಲ್ಲಿ ಎ. ರಾಜಾ ಮತ್ತು ಕೆ.ಕನಿಮೊಳಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಿರುವುದೇ ಕಾಂಗ್ರೆಸ್- ಡಿಎಂಕೆ ಮುನಿಸಿಗೆ ಕಾರಣ ಎಂದು ಹೇಳಲಾಗುತ್ತಿದೆ. 2ಜಿ ಹಗರಣ ಆರೋಪದಲ್ಲಿ ತನ್ನ ಮುದ್ದಿನ ಮಗಳು ಕನಿಮೊಳಿಯನ್ನು ಜೈಲಿಗಟ್ಟಿದ್ದು ಕರುಣಾನಿಧಿ ಅವರನ್ನು ಕೆರಳಿಸಿತ್ತು. ಕಾಂಗ್ರೆಸ್ನೊಂದಿಗಿನ ಮೈತ್ರಿ ಅಂತ್ಯಗೊಳಿಸುವುದರಿಂದ ತನಗೆ ನಷ್ಟ ಎಂಬುದನ್ನು ಅರಿತಿದ್ದರೂ, ಕರುಣಾನಿಧಿ ತಮ್ಮ ನಿಲುವನ್ನು ಬದಲಿಸಲು ಒಪ್ಪಿಲ್ಲ. ತನ್ನ ಮಗಳು ಜೈಲಿಗೆ ಹೋದ ಅಂದಿನಿಂದಲೇ ಕಾಂಗ್ರೆಸ್ ಜತೆಗಿನ ಮೈತ್ರಿ ಅಂತ್ಯಗೊಳಿಸಲು ಕರುಣಾ ನಿರ್ಧರಿಸಿದ್ದರು ಎಂದು ಡಿಎಂಕೆ ಪಕ್ಷದ ಆಂತರಿಕ ಮೂಲಗಳು ಹೇಳಿವೆ.
2014ರ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆಗೆ ಕಾಂಗ್ರೆಸ್ ಬಾರೀ ಬೆಲೆ ತೆರಬೇಕಾಗಿ ಬರುತ್ತದೆ ಎಂದು ಗೊತ್ತಿರುವುದರಿಂದಲೇ ಕರುಣಾನಿಧಿ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ಗೆ ಶಾಕ್ ಕೊಡಲು ತೀರ್ಮಾನಿಸಿದ್ದರು.
ಏತನ್ಮಧ್ಯೆ, ತಾವು ಕಾಂಗ್ರೆಸ್ ಅಥವಾ ಬಿಜೆಪಿ ಜತೆಗೆ ಮೈತ್ರಿ ಮಾಡಲ್ಲ ಎಂದು ಡಿಎಂಕೆ ಘೋಷಿಸಿದ್ದರೆ, ಇತ್ತ ಎಐಎಡಿಎಂಕೆ ಕೂಡಾ ತಾವು ಯಾವುದೇ ಪಕ್ಷ ಜತೆ ಕೈ ಜೋಡಿಸಲ್ಲ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

