ಲೋಕಸಭೆಯಲ್ಲೂ ಲೋಕಪಾಲ ಅಂಗೀಕಾರ, ಅಣ್ಣಾ ಉಪವಾಸ ಅಂತ್ಯ

ನವದೆಹಲಿ: ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಮಹತ್ವಾಕಾಂಕ್ಷೆಯ ಲೋಕಪಾಲ ಮಸೂದೆ ಬುಧವಾರ ಲೋಕಸಭೆಯಲ್ಲೂ ಅಂಗೀಕಾರವಾಗಿದೆ.
ಸಮಾಜವಾದಿ ಪಕ್ಷದ ಪ್ರತಿಭಟನೆಯ ನಡೆವೆಯೂ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಲೋಕಪಾಲ ಮಸೂದೆಯನ್ನು ಇಂದು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಲೋಕಪಾಲ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಲೋಕಪಾಲಗಾಗಿ ಕಳೆದ 9 ದಿನಗಳಿಂದ ಉಪವಾಸ ನಡೆಸುತ್ತಿದ್ದ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ತಮ್ಮ ನಿರಶನವನ್ನು ಅಂತ್ಯಗೊಳಿಸಿದ್ದಾರೆ. ಅಲ್ಲದೆ ಲೋಕಪಾಲ ಮಸೂದೆ ಅಂಗೀಕರಿಸಿದ್ದಕ್ಕಾಗಿ ಎಲ್ಲ ಸಂಸದರನ್ನು ಅಭಿನಂದಿಸಿದ್ದಾರೆ.
ಈ ಬಗ್ಗೆ ತಮ್ಮ ಸ್ವಗ್ರಾಮ ಮಹಾರಾಷ್ಟ್ರದ ರಾಳೇಗಣ್‌ಸಿದ್ಧಿಯಲ್ಲಿ ಮಾತನಾಡಿದ ಅಣ್ಣಾ, ಸದ್ಯ ಲೋಕಪಾಲ ಮಸೂದೆ ಪಾಸ್ ಆಗಿರುವುದಕ್ಕೆ ಸಂತಸವಾಗಿದೆ. ಮಸೂದೆ ಅಂಗೀಕರಿಸಿದ್ದಕ್ಕಾಗಿ ದೇಶದ ಜನತೆಯ ಪರವಾಗಿ ರಾಜಕೀಯ ಪಕ್ಷಗಳಿಗೆ ಹಾಗೂ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಧನ್ಯವಾದ ಅರ್ಪಿಸುವೆ ಎಂದಿದ್ದಾರೆ. ಅಲ್ಲದೆ ಸಂಸತ್ತಿನ ಸೆಲೆಕ್ಟ್ ಸಮಿತಿಗೂ ಅಣ್ಣಾ ಹಜಾರೆ ಧನ್ಯವಾದ ಹೇಳಿದ್ದಾರೆ.
ದೇಶದ ಬಲವರ್ಧನೆಗಾಗಿ ಎಲ್ಲ ರಾಜಕೀಯ ಪಕ್ಷಗಳು ಸಹಕರಿಸಿವೆ. ಹೀಗಾಗಿ ಸಮಾಜವಾದಿ ಪಕ್ಷ ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳಿಗೂ ಧನ್ಯವಾದ ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಲೋಕಪಾಲ ಮಸೂದೆ ಚರ್ಚೆಗಷ್ಟೆ ಸೀಮಿತವಾಗಿತ್ತು. ಆದರೆ ಇಂದು ಜನರ ಅಪೇಕ್ಷೆಯಂತೆ ಲೋಕಪಾಲ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಇದರಿಂದ ಖಂಡಿತ ಶೇ.50ರಷ್ಟು ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ ಎಂದು ಅಣ್ಣಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಲೋಕಸಭೆ ಚುನಾವಣೆಗೂ ಮುನ್ನ ಲೋಕಪಾಲ ಕಾನೂನು ಜಾರಿಯಾಗಬೇಕು ಎಂದು ಅಣ್ಣಾ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


