ಈಗಿನ ಸುದ್ದಿ

ಏರೋ ಇಂಡಿಯಾ-2013ಕ್ಕೆ ಚಾಲನೆ

ಏರೋ ಇಂಡಿಯಾ-2013ಕ್ಕೆ  ಚಾಲನೆ
Published On :

ಬೆಂಗಳೂರು: ಏಷ್ಯಾದ 2ನೇ ದೊಡ್ಡ ಏರ್ ಷೋ ಎಂದೇ ಖ್ಯಾತಿ ಪಡೆದಿರುವ ಏರೋ ಇಂಡಿಯಾ-2013ಕ್ಕೆ ಬುಧವಾರ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಭರ್ಜರಿ ಚಾಲನೆ ದೊರೆತಿದೆ.

ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಲೋಹದ ಹಕ್ಕಿಗಳ ಕಲರವ ಮುಗಿಲುಮುಟ್ಟಿದೆ. ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರು ಇಂದು ಏರೋ ಇಂಡಿಯಾ-2013ಕ್ಕೆ ಚಾಲನೆ ನೀಡಿದರು. ನಂತರ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ರಕ್ಷಣಾ ವ್ಯವಸ್ಥೆಯಲ್ಲಿ ವಿಮಾನಗಳು ತಮ್ಮದೇ ಆದ ಸ್ಥಾನವನ್ನು ಹೊಂದಿವೆ. ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ನಾವು ಭಾರತದಲ್ಲಿಯೇ ರಕ್ಷಣಾ ಮಾರುಕಟ್ಟೆ ವ್ಯವಸ್ಥೆಯನ್ನು ಸೃಷ್ಟಿಸಬೇಕಿದೆ ಎಂದರು. ಅಲ್ಲದೆ ಭಾರತದ ವೈಮಾನಿಕ ಕ್ಷೇತ್ರದಲ್ಲಿ ಬಂಡವಾಳ ಹೂಡ ಬಯಸುವ ಅಂತರಾಷ್ಟ್ರೀಯ ಉದ್ಯಮಿಗಳಿಗೆ ಆ್ಯಂಟನಿ ಸ್ವಾಗತ ನೀಡಿದರು.

ಭಾರತದಲ್ಲಿ ರಕ್ಷಣಾ ಕೈಗಾರಿಕೆ ಸ್ಥಾಪನೆಯ ನಿಟ್ಟಿನಲ್ಲಿ ಏರೋ ಇಂಡಿಯಾ-2013 ವೈಮಾನಿಕ ಪ್ರದರ್ಶನ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಆ್ಯಂಟನಿ ಅಭಿಪ್ರಾಯ ಪಟ್ಟರು.

ಪ್ರದರ್ಶನದಲ್ಲಿ ಭಾರತದ ಸ್ವದೇಶಿ ನಿರ್ಮಿತ ಸಾರಂಗ್ ಹೆಲಿಕಾಪ್ಟರ್‌ಗಳು,ಹೆಚ್.ಎ.ಎಲ್ ನಿರ್ಮಿಸಿರುವ ಡಬ್ಲ್ಯೂ.ಎಸ್.ಐ ರುದ್ರ ಯುದ್ಧ ವಿಮಾನ ಮತ್ತು ಡಿಆರ್‌ಡಿಒ ನಿರ್ಮಿಸಿರುವ ಅತ್ಯಾಧುನಿಕ ರಾಡಾರ್ ಯುದ್ಧ ವಿಮಾನ ಮತ್ತು ಅಮೇರಿಕದ ಎಫ್-16 ಯುದ್ದ ವಿಮಾನಗಳು ಸೇರಿದಂತೆ ಒಟ್ಟು 600ಕ್ಕೂ ಅಧಿಕ ವೈಮಾನಿಕ ಸಂಸ್ಥೆಗಳ ವಿಮಾನಗಳು ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುತ್ತಿವೆ.

ಅಮೇರಿಕ, ಇಸ್ರೇಲ್, ರಷ್ಯಾ, ಫ್ರಾನ್ಸ್, ಯುಕೆ, ಜರ್ಮನಿ, ಬೆಲ್ಜಿಯಂ, ಬಲ್ಗೇರಿಯಾ, ಇಟಲಿ, ಉಕ್ರೇನ್, ಆಸ್ಟ್ರೇಲಿಯಾ, ಜೆಕ್ ಗಣರಾಜ್ಯ, ಜಪಾನ್, ದ.ಆಫ್ರಿಕಾ, ಬ್ರೆಜಿಲ್ ಸೇರಿದಂತೆ ಸುಮಾರು 25ಕ್ಕೂ ಅಧಿಕ ರಾಷ್ಟ್ರಗಳ ಲೋಹದ ಹಕ್ಕಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿವೆ.

ಇಂದು ಆರಂಭಗೊಂಡ ವೈಮಾನಿಕ ಪ್ರದರ್ಶನದಲ್ಲಿ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ರಕ್ಷಣಾ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಏರ್‌ಚೀಫ್ ಮಾರ್ಷಲ್ ಎನ್.ಎ.ಕೆ. ಬ್ರೌನ್, ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ವೈಮಾನಿಕ ಕ್ಷೇತ್ರದ ಹಲವಾರು ಗಣ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.