ಈಗಿನ ಸುದ್ದಿ

ಅಭಿವ್ಯಕ್ತಿ ಸ್ವಾತಂತ್ರ್ಯ ತುಂಬಾ ಮುಖ್ಯ: ಕಮಲ್

ಅಭಿವ್ಯಕ್ತಿ ಸ್ವಾತಂತ್ರ್ಯ ತುಂಬಾ ಮುಖ್ಯ: ಕಮಲ್
Published On :

ಬೆಂಗಳೂರು: ಭಾರತೀಯ ಪ್ರಜೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ತುಂಬಾ ಮುಖ್ಯ ಎಂದು ಖ್ಯಾತ ನಟ ಮತ್ತು ನಿರ್ದೇಶಕ ಕಮಲಹಾಸನ್ ಹೇಳಿದ್ದಾರೆ.

ವಿಶ್ವರೂಪ ವಿವಾದದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದ ಕಮಲ್, ಇಂದು ನಗರದ ರೇಣುಕಾಂಬ ಚಿತ್ರಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. "ನನ್ನ ಮತ್ತು ಕರ್ನಾಟಕದ ಸಂಬಂಧ ಬಹಳ ಹಳೆಯದು. ಕನ್ನಡದ ಹಲವು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ನನ್ನ ಒಳ್ಳೆಯ ಕೆಲಸಗಳ ಹಿಂದೆ ಕನ್ನಡದ ಸ್ನೇಹಿತರಿದ್ದಾರೆ. ಕರ್ನಾಟಕದ ಜನರ ಪ್ರೋತ್ಸಾಹಕ್ಕೆ ನನ್ನ ಧನ್ಯವಾದ. ವಿಶ್ವರೂಪಂ ಚಿತ್ರಕ್ಕೆ ಕರ್ನಾಟಕದಲ್ಲಿ ಅಧ್ಬುತ ಪ್ರತಿಕ್ರಿಯೆ ಬಂದಿದೆ. ಕರ್ನಾಟಕದ ಅಭಿಮಾನಿಗಳಿಗೆ ನಾನು ಚಿರರುಣಿ. ಚಿತ್ರಕ್ಕೆ ತಮಿಳುನಾಡಿನಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ವಿಶ್ವರೂಪಂ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲ್, ವಿಶ್ವರೂಪಂ ಚಿತ್ರಕ್ಕೆ ವಿವಾದ ಹೇಗೆ ಅಂಟಿಕೊಂಡಿತೋ ನನಗೂ ಸಹ ತಿಳಿಯದು. ಚಿತ್ರವನ್ನು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡುವ ನಿರ್ಧಾರದಿಂದ ವಿವಾದ ಹುಟ್ಟಿಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಚಿತ್ರಗಳನ್ನು ವಿರೋಧಿಸುವುದು ಟ್ರೆಂಡ್ ಆಗಿದೆ. ಕಲಾವಿದನಾದವನು ತನ್ನ ಭಾವನೆ, ಅಭಿಪ್ರಾಯಗಳನ್ನು ತನ್ನದೇ ಶೈಲಿಯಲ್ಲಿ ಅಭಿವ್ಯಕ್ತಿಗೊಳಿಸುತ್ತಾನೆ. ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಬಹಳ ಮುಖ್ಯ ಎಂದರು.

ರಾಜಕೀಯ ಪ್ರವೇಶ ಕುರಿತು ಸುದ್ದಿಗಾರರೊಬ್ಬರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಕಮಲ್, ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಸಿನಿಮಾನೇ ನನ್ನ ಧರ್ಮ. ಅದನ್ನು ಬಿಟ್ಟು ನಾನು ಹೊರ ಬರಲು ಸಾದ್ಯವೇ ಇಲ್ಲ. ಸದ್ಯಕ್ಕೆ ವಿಶ್ವರೂಪಂ ಭಾಗ-2ರ ಸಿದ್ಧತೆಯಲ್ಲಿ ತೊಡಗಿದ್ದೇನೆ. ವಿಶ್ವರೂಪಂ ನಂತರ ಹಾಲಿವುಡ್‌ನಲ್ಲಿ ಒಂದು ಸಿನಿಮಾ ಮಾಡುವ ಉದ್ದೇಶವಿದೆ. ಅಲ್ಲದೆ ನನ್ನ ನಿರ್ದೇಶನದ ಶೈಲಿಯನ್ನೇ ನಾನು ಬದಲಿಸಿಕೊಳ್ಳುತ್ತೇನೆ. ಪೈರಸಿ ಚಿತ್ರರಂಗಕ್ಕೆ ಅಂಟಿದ ಶಾಪ. ಅದನ್ನು ಪ್ರೇಕ್ಷಕರೇ ತಡೆಯಬೇಕು ಎಂದರು.

ವಿಶ್ವರೂಪಂ ಚಿತ್ರ ಬಿಡುಗಡೆ ಹಿನ್ನಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ನಟ ಕಮಲ್ ಹಾಸನ್ ಅವರು ಹಿರಿಯ ನಟ ಅಂಬರೀಶ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅಂಬರೀಶ್ ಅವರಿಗೆ ಗೌರವ ಡಾಕ್ಟರೇಟ್ ಬಂದ ಹಿನ್ನಲೆಯಲ್ಲಿ ಅವರಿಗೆ ಶುಭಾಶಯ ತಿಳಿಸಿದರು. ನಂತರ ತಮ್ಮ ಆಪ್ತ ಸ್ನೇಹಿತ ನಟ ರಮೇಶ್ ಅರವಿಂದ್ ಅವರೊಂದಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಚಿತ್ರಮಂದಿರಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.