ಕಾಪ್ಟರ್ ಖರೀದಿ ಹಗರಣ: ಲಂಚಕ್ಕೆ 217 ಕೋಟಿ ಮೀಸಲು

ನವದೆಹಲಿ: ಹೆಲಿಕಾಪ್ಟರ್ ಖರೀದಿಯ ಡೀಲ್ ಕುದುರಿಸಲು ಅಗಸ್ಟವೆಸ್ಟ್ಲ್ಯಾಂಡ್ ಸಂಸ್ಥೆ 217 ಕೋಟಿ ರುಪಾಯಿಯನ್ನು ಮೀಸಲಾಗಿಟ್ಟಿತ್ತು ಎಂದು ವರದಿಯೊಂದು ಹೇಳಿದೆ.
ಹೆಲಿಕಾಪ್ಟರ್ ಖರೀದಿ ಹಗರಣವನ್ನು ತನಿಖೆ ನಡೆಸುತ್ತಿರುವ ಇಟಲಿಯ ತನಿಖಾಧಿಕಾರಿಗಳು, ಇಟಲಿಯ ಅಗಸ್ಟ ವೆಸ್ಟ್ಲ್ಯಾಂಡ್ ಸಿಇಒ ಬ್ರುನೋ ಸ್ಪ್ಯಾಂಗೊಲೀನಿ ಮತ್ತು ಫಿನ್ ಮಕಾನಿಕಾ ಸಿಇಒ ಗಿಸೆಪ್ಪಿ ಓರ್ಸಿ ಅವರು ಕಾಪ್ಟರ್ ಖರೀದಿ ಡೀಲ್ಗಾಗಿ 217 ಕೋಟಿ ರುಪಾಯಿಗಳನ್ನು ಮೀಸಲಾಗಿಟ್ಟಿದ್ದರು ಎಂಬ ಅಂಶವನ್ನು ಪತ್ತೆಹಚ್ಚಿದ್ದಾರೆ. ಸಂಸ್ಥೆಯ ಟೆಂಡರ್ ಪ್ರತಿಗಳನ್ನು ವಶಪಡಿಸಿಕೊಂಡು ಗಮನಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ.
ವಿವಿಐಪಿಗಳು ಪ್ರಯಾಣಿಸಲು 12 ಹೆಲಿಕಾಪ್ಟರ್ಗಳನ್ನು ಖರೀದಿಸಲು ಮುಂದಾಗಿದ್ದ ಭಾರತ, ಇದಕ್ಕಾಗಿ ಟೆಂಡರ್ ಕರೆದಿತ್ತು. ಅಮೇರಿಕಾ, ಇಟಲಿ ಸೇರಿದಂತೆ ವಿಶ್ವದ ಅನೇಕ ಪ್ರಮುಖ ವಿಮಾನ ತಯಾರಿಕಾ ಸಂಸ್ಥೆಗಳು ಟೆಂಡರ್ನಲ್ಲಿ ಪಾಲ್ಗೊಂಡಿದ್ದವು. ತೀವ್ರ ಪೈಪೋಟಿಯಿಂದ ಕೂಡಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಅಮೇರಿಕಾವನ್ನು ಹಿಂದಿಕ್ಕಿ ಟೆಂಡರ್ ಪಡೆಯಲು ಇಟಲಿಯ ಅಗಸ್ಟವೆಸ್ಟ್ಲ್ಯಾಂಡ್ನ ಸಿಇಒ ಆಗಿದ್ದ ಗಿಸೆಪ್ಪಿ ಓರ್ಸಿ ಅವರು ದಲ್ಲಾಳಿಗಳೊಂದಿಗೆ ಡೀಲ್ ಕುದುರಿಸಿದ್ದರು.
ಇದಕ್ಕಾಗಿ ಕ್ರಿಶ್ಚಿಯನ್ ಮೈಕೆಲ್ ಎಂಬ ದಲ್ಲಾಳಿಗೆ ಒಟ್ಟು 30 ಮಿಲಿಯನ್ (217 ಕೋಟಿ ರು)ಗಳನ್ನು ನೀಡಲು ಮುಂದಾಗಿರುವುದು ತಿಳಿದುಬಂದಿದೆ.
3.600 ಕೋಟಿ ರುಪಾಯಿಗಳಿಗೆ ಟೆಂಡರ್ ಅನ್ನು ತಮ್ಮದಾಗಿಸಿಕೊಂಡು ಅದಕ್ಕೆ ಪ್ರತಿಯಾಗಿ ಶೇ. 7.5ರಷ್ಟು ಹಣವನ್ನು ದಲ್ಲಾಳಿಗೆ ನೀಡಲು ಓರ್ಸಿ ಮತ್ತು ಸ್ಪ್ಯಾಂಗೊಲೀನಿ ಒಪ್ಪಿಗೆ ನೀಡಿದ್ದರು. ಒಟ್ಟು 362 ಕೋಟಿ ರುಪಾಯಿಯ ಡೀಲ್ಗೆ ಒಪ್ಪಿದ್ದ ಅವರು, ಈಗಾಗಲೇ ಸಂಸ್ಥೆಯ ವತಿಯಿಂದ ದಲ್ಲಾಳಿಗೆ 217 ಕೋಟಿ ರುಪಾಯಿಗಳನ್ನು ನೀಡಲು ಮುಂದಾಗಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ಏನಿದು ಹಗರಣ?
2010ರಲ್ಲಿ ಭಾರತ ಸರ್ಕಾರ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅತಿ ಗಣ್ಯ ವ್ಯಕ್ತಿಗಳ (ವಿವಿಐಪಿ) ಓಡಾಟಕ್ಕಾಗಿ ಹೆಲಿಕಾಪ್ಟರ್ಗಳನ್ನು ಖರೀದಿಸಲು ಟೆಂಡರ್ ಕರೆದಿತ್ತು. ಇಟಲಿಯ ಫಿನ್ಮೆಕಾನಿಕಾ ಈ ಟೆಂಡರ್ ಗೆದ್ದಿತ್ತು. ಒಪ್ಪಂದದ ಪ್ರಕಾರ ಇಟಲಿಯ ಈ ಕಂಪನಿ 12 ಹೆಲಿಕಾಪ್ಟರ್ಗಳನ್ನು ಕಳುಹಿಸಬೇಕಿತ್ತು. 2010ರಿಂದ ಇಲ್ಲಿವರೆಗೆ ಇದು 3 ಹೆಲಿಕಾಪ್ಟರ್ಗಳನ್ನು ಕಳುಹಿಸಿದೆ. ಈ ಒಪ್ಪಂದದ ಮೊತ್ತ ಬರೋಬ್ಬರಿ ರು. 3, 600 ಕೋಟಿ. ಆದರೆ ಹಗರಣ ಇದಲ್ಲ. ಟೆಂಡರ್ ಗೆಲ್ಲಲು ಈ ಕಂಪನಿ ಭಾರತದಲ್ಲಿನ ಮಧ್ಯವರ್ತಿಗಳಿಗೆ ಲಂಚ ಸಂದಾಯ ಮಾಡಿದೆ ಎಂಬುದೇ ನಿಜವಾದ ಹಗರಣ. ಬರೋಬ್ಬರಿ ಅಂದಾಜು ರು. 362 ಕೋಟಿ ನೀಡಿದೆ ಎಂಬುದು ಇಟಲಿಯ ತನಿಖಾ ಸಂಸ್ಥೆಗಳ ಅಂದಾಜು. ಈ ಟೆಂಡರ್ ಗೆಲ್ಲುವುದಕ್ಕಾಗಿ ಈ ಕಂಪನಿ ಐರೋಪ್ಯ ದೇಶಗಳ ಕೆಲ ಮಧ್ಯವರ್ತಿಗಳಿಗೂ ಲಂಚ ನೀಡಿದೆ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ತನಿಖಾ ಸಂಸ್ಥೆಗಳು ಕಳೆದೊಂದು ವರ್ಷದಿಂದ ಈ ಒಪ್ಪಂದದ ಮೇಲೆ ನಿಗಾ ಇಟ್ಟಿದ್ದವು. ಇದರಂತೆ ತನಿಖೆ ನಡೆಸಿರುವ ಅಲ್ಲಿನ ಸರ್ಕಾರ ಮುಖ್ಯಸ್ಥನನ್ನು ಬಂಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


