ಓವೈಸಿಗೆ ಜಾಮೀನು ಸಿಕ್ಕರೂ ಜೈಲೇ ಗತಿ
ಹೈದರಾಬಾದ್: ಪ್ರಚೋದನಕಾರಿ ಭಾಷಣ ಮಾಡಿ ಕುಖ್ಯಾತಿಗೆ ಒಳಗಾಗಿದ್ದ ಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿಗೆ ನಿಜಾಮಾಬಾದ್ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ. ಜಾಮೀನು ಸಿಕ್ಕರೂ ಓವೈಸಿ ಜೈಲಿನಲ್ಲಿಯೇ ಇರಬೇಕಿದೆ.
ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ನಿಜಾಮಾಬಾದ್ನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದಲ್ಲಿ ಓವೈಸಿ ವಿರುದ್ಧ ದೂರು ದಾಖಲಾಗಿತ್ತು. ದೂರಿನ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಇಂದು ಒವೈಸಿಗೆ ಶರತ್ತುಬದ್ಧ ಜಾಮೀನು ನೀಡಿದೆ. ಅಲ್ಲದೆ 10.000 ರುಪಾಯಿಗಳ ಭದ್ರತಾ ಠೇವಣಿ ನೀಡಿ ಜಾಮೀನು ಪಡೆಯುವಂತೆ ಆದೇಶಿಸಿದೆ. ಆದರೆ ಶಾಸಕ ಓವೈಸಿಗೆ ಜಾಮೀನು ಸಿಕ್ಕಿದ್ದರೂ ಆತ ಜೈಲಿನಲ್ಲಿಯೇ ಕಾಲಕಳೆಯ ಬೇಕಿದೆ.
ಏಕೆಂದರೆ ಓವೈಸಿ ವಿರುದ್ಧ ಹೈದರಾಬಾದಿನ ಹಲವು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಕೊಲೆ ಬೆದರಿಕೆ, ಅಪರಾಧ ಹಿನ್ನಲೆ, ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪ ಸೇರಿದಂತೆ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಕುರಿತು ಹಲವು ದೂರುಗಳು ದಾಖಲಾಗಿವೆ. ಈಗ ನಿಜಾಮಾಬಾದ್ನ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ದೊರೆತಿರುವುದು ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ.
ಓವೈಸಿ ವಿರುದ್ಧ 2007ರಲ್ಲಿಯೇ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಕುರಿತು ದೂರು ದಾಖಲಾಗಿತ್ತು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. 2011ರಲ್ಲಿ ಕರ್ನೂಲ್ನಲ್ಲಿ ನಡೆದ ರ್ಯಾಲಿ ವೇಳೆ ಮಾಜಿ ಪ್ರಧಾನಿ ದಿ ಪಿ.ವಿ ನರಸಿಂಹರಾವ್ ಅವರನ್ನು ಕೊಲೆಗಾರ, ಮೋಸಗಾರ, ಅಪ್ರಮಾಣಿಕ ಮತ್ತು ಕಳ್ಳ ಎಂದು ಉರ್ದು ಭಾಷೆಯಲ್ಲಿ ಬರೆದು ಘೋಷಣೆ ಕೂಗಿದ್ದನು. ಈ ಬಗ್ಗೆಯೂ ಕರ್ನೂಲ್ ಪೊಲೀಸ್ ಠಾಣೆಯಲ್ಲಿ ಓವೈಸಿ ವಿರುದ್ಧ ದೂರು ದಾಖಲಾಗಿತ್ತು.
ಕಳೆದ ವರ್ಷ ಅಂದರೆ 2012ರ ಏಪ್ರಿಲ್ನಲ್ಲಿ ಕರೀಂ ನಗರದಲ್ಲಿ ಮತ್ತು ಡಿಸೆಂಬರ್ನಲ್ಲಿ ಹೈದರಾಬಾದಿನಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಓವೈಸಿ ಪ್ರಚೋದನಕಾರಿ ಭಾಷಣ ಮಾಡಿದ್ದ. ಅಲ್ಲದೆ ಹೈದರಾಬಾದಿನ ಚಾರ್ಮಿನಾರ್ ಬಳಿ ಇರುವ ಹಿಂದೂ ದೇವಾಲಯ ಭಾಗ್ಯಲಕ್ಷ್ಮಿ ದೇವಾಲಯವನ್ನು ಕೆಡವಿಹಾಕುವಂತೆಯೂ ಈ ಹಿಂದೆ ಭಾಷಣ ಮಾಡಿದ್ದನು. ಈ ಬಗ್ಗೆಯೂ ನ್ಯಾಯಾಲಯದಲ್ಲಿ ದೂರುಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳಿಂದಾಗಿ ಶಾಸಕ ಓವೈಸಿಗೆ ಜಾಮೀನು ಸಿಕ್ಕರೂ ಆತ ಜೈಲಿನಲ್ಲಿಯೇ ಇರಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

