ಕಾಪ್ಟರ್ ಖರೀದಿ ಹಗರಣ: ನಾಳೆ ಇಟಲಿಗೆ ಸಿಬಿಐ ತಂಡ

ನವದೆಹಲಿ: ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣದ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ನಾಳೆ ಇಟಲಿಗೆ ಹಾರಲಿದೆ.
ಕಾಪ್ಟರ್ ಖರೀದಿ ಹಗರಣದ ತನಿಖೆ ನಡೆಸುತ್ತಿರುವ ಇಟಲಿ ತನಿಖಾ ಸಂಸ್ಥೆಯ ತನಿಖಾಧಿಕಾರಿಗಳನ್ನು ಭೇಟಿಮಾಡಿ, ಹಗರಣ ಸಂಬಂಧ ಮಾಹಿತಿ ಸಂಗ್ರಹಿಸಲು ಸಿಬಿಐ ತನಿಖಾಧಿಕಾರಿಗಳು ನಾಳೆ ಇಟಲಿ ದೇಶಕ್ಕೆ ತೆರಳಲಿದ್ದಾರೆ. ಭಾರತೀಯ ರಕ್ಷಣಾ ಸಚಿವಾಲಯದ ಕೆಲ ಅಧಿಕಾರಿಗಳೂ ಸಹ ಸಿಬಿಐ ತಂಡದೊಂದಿಗೆ ಇಟಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಪ್ಟರ್ ಖರೀದಿ ಒಪ್ಪಂದ ಕುರಿತಂತೆ ಕಿಕ್ಬ್ಯಾಕ್ ಪಡೆದ ಮಧ್ಯವರ್ತಿಗಳು ಮತ್ತು ಒಪ್ಪಂದಕ್ಕೆ ಸಹಕರಿಸಿದ ಭಾರತೀಯ ಭ್ರಷ್ಟ ಅಧಿಕಾರಿಗಳ ಮಾಹಿತಿ ಕಲೆ ಹಾಕಲು ಸಿಬಿಐ ನೇತೃತ್ವದ ತಂಡ ಇಟಲಿಗೆ ಪ್ರಯಾಣ ಬೆಳೆಸಿದೆ. ಹಗರಣ ಕುರಿತಂತೆ ಸಿಬಿಐ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಮನವಿ ಮಾಡಿರುವ ಭಾರತೀಯ ರಕ್ಷಣಾ ಸಚಿವಾಲಯ ಈ ಕುರಿತು ತನ್ನದೊಂದು ಪತ್ರವನ್ನು ಸಿಬಿಐ ಅಧಿಕಾರಿಗಳೊಂದಿಗೆ ರವಾನಿಸಿದೆ. ಅಲ್ಲದೆ ಹಗರಣ ಕುರಿತಂತೆ ಭಾರತ ಮತ್ತು ಇಟಲಿಯ ಮಾಧ್ಯಮಗಳಲ್ಲಿ ನಡೆದ ಚರ್ಚೆಯ ಕೆಲ ತುಣುಕುಗಳನ್ನೂ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತಕ್ಕೆ ಮುಖಭಂಗ...
ಈ ನಡುವೆ ಹಗರಣದ ಕುರಿತು ತನಿಖೆ ನಡೆಸಲು ಮಾಹಿತಿ ಕೋರಿದ್ದ ಭಾರತಕ್ಕೆ ತೀವ್ರ ಮುಖಭಂಗವಾಗಿದೆ. ಏಕೆಂದರೆ ಮಾಹಿತಿ ವಿನಿಮಯಕ್ಕೆ ಇಟಲಿ ನ್ಯಾಯಾಲಯ ನಕಾರ ವ್ಯಕ್ತಪಡಿಸಿದೆ. ತನಿಖೆಯ ಮಾಹಿತಿ ವಿನಿಮಯದಿಂದ ತನ್ನ ತನಿಖೆಗೆ ಅಡ್ಡಿಯುಂಟಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಹಗರಣದ ದಾಖಲೆ ವಿನಿಮಯಕ್ಕಾಗಿ ಭಾರತ ಸರ್ಕಾರ, ಇಟಲಿ ನ್ಯಾಯಾಲಯದ ಬಳಿ ಮನವಿ ಮಾಡಿತ್ತು. ಆದರೆ ಇಟಲಿ ನ್ಯಾಯಾಲಯ ಭಾರತದ ಮನವಿಯನ್ನು ತಿರಸ್ಕರಿಸಿದೆ.
ಭಾರತದ ಭ್ರಷ್ಟ ಅಧಿಕಾರಿ ವರ್ಗ ಮತ್ತು ರಾಜಕಾರಣಿಗಳ ಬಗ್ಗೆ ತಿಳಿದಂತಿರುವ ಇಟಲಿ ನ್ಯಾಯಾಲಯ ದಾಖಲೆ ವಿನಿಮಯ ಮನವಿಯನ್ನು ಸ್ಪಷ್ಟವಾಗಿಯೇ ತಿರಸ್ಕರಿಸಿದೆ. ಅಂತೆಯೇ ಹಗರಣ ಸಂಬಂಧ ಮಾಹಿತಿ ವಿನಿಮಯಕ್ಕಾಗಿ ನಾಳೆ ಇಟಲಿಗೆ ತೆರಳಲಿರುವ ಸಿಬಿಐ ತಂಡಕ್ಕೆ, ಅಲ್ಲಿನ ತನಿಖಾಧಿಕಾರಿಗಳು ದಾಖಲೆ ನೀಡುತ್ತಾರೆಯೇ? ಎಂಬ ಪ್ರಶ್ನೆ ಮೂಡುತ್ತಿದೆ. ರಾಜಕಾರಣಿಗಳನ್ನು ಮತ್ತು ಅಧಿಕಾರಿ ವರ್ಗವನ್ನು ನಂಬಿ, ಇಟಲಿ ದಾಖಲೆ ವಿನಿಮಯ ಮಾಡಿಕೊಂಡಿದ್ದರೆ, ನಮ್ಮ ದೇಶದ 'ಬೃಹತ್ ಹೆಗ್ಗಣಗಳು' ಅವುಗಳನ್ನೂ ಸಹ ಮಾರುಕಟ್ಟೆಯಲ್ಲಿ ಇಡುತ್ತಿದ್ದರೇನೋ...?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


