ಕಾಪ್ಟರ್ ಹಗರಣದ ಜೆಪಿಸಿ ತನಿಖೆಗೆ ರಾಜ್ಯಸಭೆ ಅಸ್ತು

ನವದೆಹಲಿ: ರಾಜ್ಯಸಭೆಯಲ್ಲಿ ವಿವಿಐಪಿ ಹೆಲಿಕಾಪ್ಟರ್ ಹಗರಣ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಹಗರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವ ಪ್ರಸ್ತಾವನೆಯನ್ನು ರಾಜ್ಯಸಭೆ ಅಂಗೀಕರಿಸಿದೆ.
ಹಗರಣ ಕುರಿತು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು, ರಕ್ಷಣಾ ಸಚಿವರು ಹಗರಣದ ಹೊಣೆಹೊರಬೇಕು. ಹಗರಣದ ಎಲ್ಲ ಆರೋಪಿಗಳು ಭಾರತದಲ್ಲಿಯೇ ಇದ್ದಾರೆ. ಹಗರಣ ಕುರಿತಂತೆ ಕೇಂದ್ರಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಜೇಟ್ಲಿ ಆರೋಪವನ್ನು ನಿರಾಕರಿಸಿದ ರಕ್ಷಣಾ ಸಚಿವ ಎಕೆ ಆಂಟನಿ, ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಹಗರಣವನ್ನು ಕೇಂದ್ರಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿಯೇ ಅಗಸ್ಟಾ ವೆಸ್ಟ್ಲ್ಯಾಂಡ್ ಸಂಸ್ಥೆಗೆ ನೋಟಿಸ್ ನೀಡಿದ್ದೇವೆ. ಅಲ್ಲದೆ ಹಗರಣ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವ ಪ್ರಸ್ತಾಪವನ್ನು ವಿಪಕ್ಷಗಳ ಮುಂದಿಟ್ಟಿದ್ದೇವೆ ಆದರೆ ಅವರು ಅದಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂದರು.
ಇಟಲಿಯಲ್ಲಿ ತನಿಖೆ ಅಂತಿಮ ಹಂತದಲ್ಲಿದೆ. ನಾವೂ ಸಹ ಇಟಲಿ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತದಲ್ಲಿ ತನಿಖೆ ನಡೆಸುತ್ತಿರುವ ಕೇಂದ್ರಿಯ ಅಪರಾಧ ತನಿಖಾ ಸಂಸ್ಥೆ (ಸಿಬಿಐ) ಚಾರ್ಜ್ಶೀಟ್ ದಾಖಲಿಸಿದೆ. 2 ದೇಶಗಳಲ್ಲಿ ನಡೆಯುತ್ತಿರುವ ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಆತುರ ಬೇಡ ಎಂದು ಆಂಟನಿ ಅಭಿಪ್ರಾಯಪಟ್ಟರು.
ಈ ನಡುವೆ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೇ ಹಗರಣವನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸುವ ಸರ್ಕಾರದ ನಿರ್ಧಾರಕ್ಕೆ ರಾಜ್ಯಸಭೆ ಒಪ್ಪಿಗೆ ನೀಡಿದೆ. ಸರ್ಕಾರದ ನಿಲುವನ್ನು ಖಂಡಿಸಿ ವಿಪಕ್ಷಗಳಾದ ಬಿಜೆಪಿ, ಟಿಎಂಸಿ, ಜೆಡಿಯು ಮತ್ತು ಎಡಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸಭಾತ್ಯಾಗ ಮಾಡಿದವು.
ರಾಜ್ಯಸಭಾ ಕಲಾಪದಲ್ಲಿ ಕಾಪ್ಟರ್ ಖರೀದಿ ಹಗರಣ ತನಿಖೆಯನ್ನು ಜೆಪಿಸಿಗೆ ಒಪ್ಪಿಸುವ ಕುರಿತು ನಿನ್ನೆ ಕೇಂದ್ರಸರ್ಕಾರ ಪ್ರಸ್ತಾಪ ಸಲ್ಲಿಸಿತ್ತು. ಕೇಂದ್ರಸರ್ಕಾರದ ಪ್ರಸ್ತಾಪಕ್ಕೆ ವಿರೋಧ ಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ ಹಗರಣವನ್ನು ಜೆಪಿಸಿಗೆ ಒಪ್ಪಿಸುವ ಮೂಲಕ ಕೇಂದ್ರಸರ್ಕಾರ ಕಾಲಹರಣ ಮಾಡಲು ಮುಂದಾಗಿದೆ ಎಂದೂ ಆರೋಪಿಸಿತ್ತು.
ಒಟ್ಟಾರೆ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಒಪ್ಪಂದ ಕೇಂದ್ರಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


