ಈಗಿನ ಸುದ್ದಿ

ಜೆಬಿಟಿ ಹಗರಣ: ಓಂ ಪ್ರಕಾಶ್ ಚೌಟಾಲಾ, ಅಜಯ್ ಚೌಟಾಲಾಗೆ 10 ವರ್ಷ ಜೈಲು

ಜೆಬಿಟಿ ಹಗರಣ: ಓಂ ಪ್ರಕಾಶ್ ಚೌಟಾಲಾ, ಅಜಯ್ ಚೌಟಾಲಾಗೆ 10 ವರ್ಷ ಜೈಲು
Published On :

ನವದೆಹಲಿ:  2000 ಇಸವಿಯಲ್ಲಿ ಅಕ್ರಮವಾಗಿ 3,206 ಜೂನಿಯರ್ ಬೇಸಿಕ್ ಟ್ರೈನ್ಡ್ ಟೀಚರ್ಸ್ (ಜೆಬಿಟಿ)ನ್ನು ನೇಮಕ ಮಾಡಿದ ಆರೋಪದಲ್ಲಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಮತ್ತು ಆತನ ಪುತ್ರ ಅಜಯ್ ಚೌಟಾಲಾ ಸೇರಿದಂತೆ ಇನ್ನಿತರ 53 ಮಂದಿ ತಪ್ಪಿತಸ್ಥರೆಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ದೆಹಲಿ ಹೈಕೋರ್ಟ್ ಮಂಗಳವಾರ ಈ ಮಹತ್ತರ ತೀರ್ಪು ನೀಡಿದ್ದು, ಓಂ ಪ್ರಕಾಶ್ ಚೌಟಾಲಾ ಮತ್ತು ಅವರ ಪುತ್ರ ಅಜಯ್ ಚೌಟಾಲಾ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅದೇ ವೇಳೆ ಈ ಅಪ್ಪ ಮಗ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಹೈಕೋರ್ಟ್ ಆದೇಶಿಸಿದೆ.
ಚೌಟಾಲಾ ಅವರ ಜತೆ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್, ಚೌಟಾಲಾರ ಸ್ಪೆಷಲ್ ಡ್ಯೂಟಿ ಮಾಜಿ ಅಧಿಕಾರಿ ವಿದ್ಯಾಧರ್ ಮತ್ತು ರಾಜಕೀಯ ಸಲಹೆಗಾರರಾಗಿದ್ದು, ನಂತರ ಮುಖ್ಯಮಂತ್ರಿಯಾದ ಶೇರ್ ಸಿಂಗ್ ಬದ್ಮಾಶಿ ಅವರಿಗೂ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಇನ್ನುಳಿದ ಆರೋಪಿಗಳಿಗೆ 3-5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಸ್ತುತ ಹಗರಣದ ಬಗ್ಗೆ ಜನವರಿ 16ಕ್ಕೆ ವಿಚಾರಣೆ ನಡೆಸಿದ ನ್ಯಾಯಾಲಯವು ಮೋಸ, ವಂಚನೆ, ಸುಳ್ಳು ಆಧಾರದ ಸ್ವೀಕೃತಿ  ಹಾಗು ಸಂಚು ಆರೋಪದ ಜತೆಗೆ ಅಧಿಕಾರ ದುರ್ಬಳಕೆಗೊಳಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಚೌಟಾಲಾ ಮತ್ತು ಆತನ ಅಧಿಕಾರಿಗಳು ತಪ್ಪಿತಸ್ಥರೆಂದು ಹೇಳಿತ್ತು.
ಇಂಡಿಯನ್ ನ್ಯಾಷನಲ್ ಲೋಕ್ ದಳದ ಮುಖ್ಯಸ್ಥ, 78ರ ಹರೆಯದ ಓಂ ಪ್ರಕಾಶ್ ಚೌಟಾಲಾ ಈ ಹಗರಣದ ಪ್ರಮುಖ ಆರೋಪಿಯಾಗಿದ್ದಾರೆ.
ಚೌಟಾಲಾ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದನ್ನು ಕೇಳಿ ಇಂಡಿಯನ್ ಲೋಕ್ ದಳದ ಸಾವಿರಾರು ಬೆಂಬಲಿಗರು ರೋಹಿಣಿ ಕೋರ್ಟ್ ಕಾಂಪ್ಲೆಕ್ಸ್ ಹೊರಗಡೆ ಪೊಲೀಸರ ಜತೆ ಸಂಘರ್ಷವನ್ನುಂಟು ಮಾಡಿದ್ದಾರೆ. ಬೆಂಬಲಿಗರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿದ್ದಾರೆ.
ಶಿಕ್ಷೆ ಪ್ರಕಟವಾದಾಗ ಬೆಂಬಲಿಗರು ಕೋರ್ಟ್ ಆವರಣದೊಳಗೆ ಕಲ್ಲು ತೂರಾಟ ಹಾಗು ಕಚ್ಛಾ ಬಾಂಬ್ ಎಸೆದಿದ್ದಾರೆ ಎಂದು ಕೆಲವೊಂದು ಮೂಲಗಳು ವರದಿ ಮಾಡಿವೆ.
ಸದ್ಯ, ಪ್ರತಿಭಟನಾಕಾರರನ್ನು ತಡೆಯಲು ಪ್ರಸ್ತುತ ಪ್ರದೇಶದಲ್ಲಿ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.