ಈಗಿನ ಸುದ್ದಿ

ಬಿಹಾರ ಬಿಸಿಯೂಟ ಪ್ರಕರಣ: ಪ್ರಾಂಶುಪಾಲರ ವಿರುದ್ಧ ಬಂಧನ ವಾರೆಂಟ್

Published On :

ಪಾಟ್ನಾ: ಬಿಹಾರದ ಸರ್ಕಾರಿ ಶಾಲೆಯಲ್ಲಿ ವಿಷಪೂರಿತ ಬಿಸಿಯೂಟ ಸೇವಿಸಿ 23 ಮಕ್ಕಳು ಸಾವನ್ನಪ್ಪಿದ್ದ ಪ್ರಕರಣ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರ ವಿರುದ್ಧ ಬಿಹಾರದ ನ್ಯಾಯಾಲಯ ಸೋಮವಾರ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.

ಗಂಡಮಾನ್ ಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಷಪೂರಿತ ಬಿಸಿಯೂಟ ಸೇವಿಸಿ 23 ಮಕ್ಕಳು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರು. ಘಟನೆ ನಡೆದಾಗಿನಿಂದಲೂ ಶಾಲೆಯ ಪ್ರಾಂಶುಪಾಲರು ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.

ಜುಲೈ 16ರಂದು ಘಟನೆ ಸಂಭವಿಸಿದ್ದು, ಶಾಲೆಯ ಪ್ರಾಂಶುಪಾಲರಾದ ಮೀನಾ ದೇವಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಮೀನಾ ದೇವಿ ಅವರ ನಿರ್ಲಕ್ಷ್ಯ ದುರಂತಕ್ಕೆ ಕಾರಣ ಎಂದು ಸರ್ಕಾರಿ ತನಿಖಾ ವರದಿ ಹೇಳಿದೆ.

ಸರನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಅಭಿಜಿತ್ ಸಿನ್ಹಾ ಅವರು ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದ್ದಾರೆ. ಚಪ್ರಾ ಜಿಲ್ಲೆಯ ನಾಗರಿಕ ನ್ಯಾಯಾಲಯ ಮೀನಾ ದೇವಿ ವಿರುದ್ಧ ವಾರೆಂಟ್ ಹೊರಡಿಸಿದ್ದಾಗಿಂನಿಂದಲೂ ಅವರು ತಲೆಮರೆಸಿಕೊಂಡಿದ್ದಾರೆ. ಆದ್ದರಿಂದ ಮೀನಾ ಅವರು ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಬಿಸಿಯೂಟದಲ್ಲಿ ಕ್ರಿಮಿನಾಶಕ ಮಿಶ್ರಣವಾಗಿದ್ದರಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ವರದಿ ಹೇಳಿದೆ. ಮಕ್ಕಳಿಗೆ ಊಟ ನೀಡುವ ಮುನ್ನ ಆಹಾರ ತಪಾಸಣೆ ಅಗತ್ಯ. ಆದರೆ ಇದರ ಬಗ್ಗೆ ಪ್ರಾಂಶುಪಾಲರು ಮತ್ತು ಅಧಿಕಾರಿಗಳು ನಿರ್ಲಕ್ಷ್ಯತೆಯೇ ಮಕ್ಕಳ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಕ್ರಿಮಿನಾಶಕ ಡಬ್ಬದಲ್ಲಿ ಅಡುಗೆ ಎಣ್ಣೆಯನ್ನು ಶೇಖರಿಸಿಡಲಾಗಿತ್ತು. ಇದನ್ನು ಅಡುಗೆಗೆ ಬಳಸಲು ಅಡುಗೆಯವರು ನಿರಾಕರಿಸಿದ್ದರು, ಮೀನಾ ಅವರು ಅದನ್ನೇ ಅಡುಗೆಗೆ ಬಳಸಬೇಕೆಂಬ ಒತ್ತಡ ಹೇರಿದ್ದರು ಎಂದು ಮೂಲಗಳು ತಿಳಿಸಿವೆ.

ಮೀನಾ ಅವರನ್ನು ಪ್ರಾಂಶುಪಾಲ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಮೀನಾ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಮೊಗದ್ದಮೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.