ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

ಬೆಂಗಳೂರು: ಹೊಸ ಸರ್ಕಾರ ಸ್ವಚ್ಛ, ಸ್ಥಿರ, ಪಾರದರ್ಶಕ, ಜನಪರ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು ಮತ್ತು ಆಡಳಿತದಲ್ಲಿ ಕಣ್ಣಿಗೆ ಕಾಣುವಂತ ಬದಲಾವಣೆ ತರಬೇಕು ಎಂದು ರಾಜ್ಯಪಾಲ ಎಚ್.ಆರ್ ಭಾರದ್ವಾಜ್ ಅವರು ಸೋಮವಾರ ಹೇಳಿದ್ದಾರೆ.
ಇಂದು 14ನೇ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ನೂತನ ಸರ್ಕಾರದ ಸಚಿವರು ಹಾಗೂ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಮೊದಲ ಬಾರಿಗೆ ಅವರ ಪತ್ನಿ ಪ್ರಫುಲ್ಲಾತಾ ಭಾರದ್ವಾಜ್ ಅವರು ಅಧಿವೇಶನ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.
ಇನ್ನು ತಮ್ಮ ಭಾಷಣದಲ್ಲಿ ಹಿಂದಿನ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪ ಮಾಡಿದ ಭಾರದ್ವಾಜ್ ಅವರು, ಭ್ರಷ್ಟಾಚಾರದಿಂದಾಗಿ ರಾಜ್ಯ ತಲೆ ತಗ್ಗಿಸುವಂತೆ ಆಗಿತ್ತು ಎಂದರು.
ತಮ್ಮ ಭಾಷಣದಲ್ಲಿ ಸರ್ಕಾರದ ಆಶೋತ್ತರಗಳನ್ನು ವಿವರಿಸಿದ ಭಾರಧ್ವಾಜ್ ಅವರು, ಜುಲೈ 1ರಿಂದ 1ರುಪಾಯಿಗೆ 1 ಕೆಜೆ ಅಕ್ಕಿ ಯೋಜನೆ ಜಾರಿ, ವಿದ್ಯಾರ್ಥಿ ವೇತನ ನೇರ ಬ್ಯಾಂಕ್ ಖಾತೆಗೆ ಜಮೆ, ಐಟಿ-ಬಿಟಿ ಕ್ಷೇತ್ರವನ್ನು ಮೇಲೆತ್ತಲು ಹಾಗೂ ಕಂದಾಯ ಆಡಳಿತ ಸದೃಡಗೊಳಿಸಲು ಸೂಕ್ತ ಕ್ರಮ, ಮುಂದಿನ ವರ್ಷದ ಜನವರಿಯಲ್ಲಿ ಗ್ರಾಮೀಣ ಭಾಗದಲ್ಲೂ 1 ಸಾವಿರ ನೀರು ಶುದ್ಧೀಕರಣ ಘಟಕ ಸ್ಥಾಪನೆ, ಮಂಗಳೂರಿನಲ್ಲಿ ಮೀನುಗಾರಿಕೆ ಕಾಲೇಜ್ ಸ್ಥಾಪನೆ, ನೀರಾವರಿ ಯೋಜನೆಗಳ ಪೂರ್ಣ ಮಾಡಲು, ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಒತ್ತು. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಹಾಗೂ ಸಾಚಾರ್ ವರದಿ ಮತ್ತು ರಂಗನಾಥ್ ಮಿಶ್ರಾ ವರದಿ ಜಾರಿಗೆ ಬದ್ಧ ಎಂದು ಹೇಳಿದರು.
ಹಾಲಿಗೆ ನೀಡುವ ಪ್ರೋತ್ಸಾಹಧನ 2ರುಪಾಯಿನಿಂದ 4 ರುಪಾಯಿಗೆ ಹೆಚ್ಚಳ, ಗುಡಿಸಲು ರಹಿತ, ಕೊಳಗೇರಿ ಮುಕ್ತ ರಾಜ್ಯ ನಿರ್ಮಾಣ ಸೇರಿದಂತೆ ಕೈಗೆಟಕುವ ಬೆಲೆಯಲ್ಲಿ ಎಲ್ಲರಿಗೂ ವಸತಿ, ಎಸ್ಸಿಎಸ್ಟಿಗಳಿಗೆ ಮೊದಲ ಆದ್ಯತೆ. ಪ್ರಾದೇಶಿಕ ಭಾಷೆಗಳಾದ ತುಳು, ಬ್ಯಾರಿ, ಕೊಡವ, ಲಂಬಾಣಿ ಹಾಗೂ ಕೊಂಕಣಿ ಅಭಿವೃದ್ಧಿಗೆ ಒತ್ತು. 2007ರ ಮೂಲ ಸೌಕರ್ಯ ನೀತಿ ಪರಿಷ್ಕರಣೆಗೆ ಕ್ರಮ. ರಾಜ್ಯ ಪಶು ವೈದ್ಯಕೀಯ ವಿವಿಗಳ ಆಧುನೀಕರಣ ಹಾಗೂ ವಿಶ್ವವಿದ್ಯಾನಿಲಯಗಳ ಮೇಲ್ದರ್ಜೆಗೆ ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯಪಾಲರು ತಿಳಿಸಿದರು.
ಕೃಷಿ ಬೆಲೆ ಆಯೋಗ ಸ್ಥಾಪನೆ, ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಭರ್ತಿ ಸೇರಿದಂತೆ, ವಿಶ್ವವಿದ್ಯಾಲಯಗಳ ಬೋಧಕ ಹುದ್ದೆ ಭರ್ತಿಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ರಾಜ್ಯಪಾಲರ ಭಾಷಣಕ್ಕೆ ಪ್ರತಿಪಕ್ಷಗಳು ಕಿಡಿ
ರಾಜ್ಯಪಾಲರು ತಮ್ಮ ಭಾಷಣದಲ್ಲಿ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೆಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕೇಂದ್ರದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ಸಿಗರು ಈ ಮಾತು ಹೇಳಿಸಬಾರದಿತ್ತು ಮತ್ತು ರಾಜ್ಯುಪಾಲರು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು ಎಂದರು. ಅಲ್ಲದೆ ನನ್ನ ಅವಧಿಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು ಎಂದರು.
ನಮ್ಮ ಯೋಜನೆಗಳೇ ಮುಂದುವರೆದಿವೆ: ಬಿಜೆಪಿ
ಬಿಜೆಪಿ ಸರ್ಕಾರದ ಯೋಜನೆಗಳು ಮುಂದುವರೆದಿವೆ. ನಮ್ಮ ಯೋಜನೆಗಳನ್ನೇ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಘೋಷಿಸಿದೆ. ಅದರಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ. ಆದರೆ ಗುಟ್ಕಾ ನಿಷೇಧ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.
ಹೊಸ ಯೋಜನೆಗಳೇ ಇಲ್ಲ: ಜೆಡಿಎಸ್
ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ. ಬಿಜೆಪಿ ಸರ್ಕಾರದಲ್ಲಿದ್ದ ಯೋಜನೆಗಳನ್ನೇ ಘೋಷಿಸಿದ್ದಾರೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈ ಬಗ್ಗೆ ಸದನದಲ್ಲಿ ಚರ್ಚಿಸಲಾಗುವುದು ಎಂದು ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


