ಬಿಜೆಪಿ ಎಲ್ಲ ಸ್ಥಾನಗಳಿಗೆ ಆಡ್ವಾಣಿ ರಾಜೀನಾಮೆ

ನವದೆಹಲಿ: ನಿನ್ನೆ ಅಂತ್ಯಗೊಂಡ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ 2014ರ ಚುನಾವಣಾ ಪ್ರಚಾರ ಸಮಿತಿಯ ಸಾರಥ್ಯ ವಹಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಸೋಮವಾರ ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ಎಲ್ಲ ಸ್ಥಾನಗಳಿಗೂ ಆಡ್ವಾಣಿ ರಾಜೀನಾಮೆ ನೀಡಿದ್ದು, ರಾಜಿನಾಮೆ ಪತ್ರವನ್ನು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ರವಾನಿಸಿದ್ದಾರೆ.
ರಾಜೀನಾಮೆ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಆಡ್ವಾಣಿ, ನಾನು ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದು, ತಾವು ಒಬ್ಬ ಕಾರ್ಯಕರ್ತನಾಗಿ ಪಕ್ಷದಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ. ಅಲ್ಲದೆ ಪಕ್ಷದಲ್ಲಿನ ಕೆಲವು ಬೆಳವಣಿಗೆಗಳ ಬಗ್ಗೆ ನೋವಿನಿಂದ ಮಾತನಾಡಿದ ಬಿಜೆಪಿ ಭೀಷ್ಮ, ಇತ್ತೀಚಿಗೆ ಪಕ್ಷ ತೆಗೆದುಕೊಂಡ ಕೆಲ ನಿರ್ಧಾರಗಳಿಂದ ನಾನು ಬೇಸತ್ತಿದ್ದೇನೆ. ಪಕ್ಷದ ಸಿದ್ಧಾಂತಗಳಲ್ಲೂ ಭಾರೀ ಬದಲಾವಣೆಯಾಗುತ್ತಿದ್ದು, ಕೆಲವು ನಾಯಕರು ಪಕ್ಷದ ಮೂಲ ಉದ್ದೇಶವನ್ನೇ ಮರೆತ್ತಿದ್ದಾರೆ ಎಂದು ಆರೋಪಿಸಿದರು.
ಮೂರು ದಿನಗಳ ಕಾಲ ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ ಗೈರು ಆಗಿದ್ದ ಆಡ್ವಾಣಿ ಇಂದು ದಿಢೀರ್ ರಾಜೀನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಾಜೀನಾಮೆ ನೀಡುವ ಮೂಲಕ ಆಡ್ವಾಣಿ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರಾ ಅಥವಾ ಮೋದಿ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.
ಆಡ್ವಾಣಿ ಅನುಪಸ್ಥಿತಿಯಲ್ಲಿ 2014ರ ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನಿನ್ನೆ ಮೋದಿ ಅವರನ್ನು ಆಯ್ಕೆ ಮಾಡಲಾಗಿದ್ದು. ಮೋದಿಗೆ ಪಟ್ಟ ಕಟ್ಟುವುದನ್ನು ಮೊದಲಿನಿಂದಲೂ ಪರೋಕ್ಷವಾಗಿ ವಿರೋಧಿಸುತ್ತಿದ್ದ ಆಡ್ವಾಣಿ ಗೋವಾ ಕಾರ್ಯಕಾರಣಿ ಸಭೆಯಿಂದಲೂ ದೂರ ಉಳಿಯುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು.
ಆಡ್ವಾಣಿ ರಾಜೀನಾಮೆ ಸ್ವೀಕರಿಸಲ್ಲ: ರಾಜನಾಥ್ ಸಿಂಗ್
ಎಲ್.ಕೆ.ಆಡ್ವಾಣಿ ಅವರ ರಾಜೀನಾಮೆ ಪತ್ರ ಕೈಸೇರಿದ ಕೂಡಲೇ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, ತಾವು ಆಡ್ವಾಣಿ ಅವರ ರಾಜೀನಾಮೆ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಆಡ್ವಾಣಿ ರಾಜೀನಾಮೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಆಡ್ವಾಣಿ ಅವರು ರಾಜೀನಾಮೆ ನೀಡಬಾರದಿತ್ತು ಮತ್ತು ಅವರ ಬಗ್ಗೆ ನಾನು ವೈಯಕ್ತಿಕವಾಗಿ ಮಾತನಾಡಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


