ಈಗಿನ ಸುದ್ದಿ

ಎನ್‌ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಕ್ಕೆ?

ಎನ್‌ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಕ್ಕೆ?
Published On :

ಪಾಟ್ನಾ: ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ರಾಜಿನಾಮೆ ಹಿಂಪಡೆದಿದ್ದರಿಂದ ಕೊಂಚ ನೀರಾಳವಾಗಿದ್ದ ಬಿಜೆಪಿಗೆ ಇದೀಗ ಜನತಾದಳ(ಸಂಯುಕ್ತ) ಜೆಡಿಯು ಮೈತ್ರಿಕೂಟದಿಂದ ಹೊರ ಬರುವ ಮುನ್ಸೂಚನೆ ನೀಡಿರುವುದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ನೇಮಿಸಿದ್ದು, ಹಾಗೂ ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಮೋದಿ ಅವರನ್ನು ಬಿಂಬಿಸುತ್ತಿರುವ ಬಿಜೆಪಿಯ ನಡೆಯನ್ನು ವಿರೋಧಿಸಿದ್ದ ಜೆಡಿಯು, ಇದೀಗ ಮೈತ್ರಿಕೂಟದಿಂದ ಹೊರಬರಲು ತೀರ್ಮಾನಿಸಿದೆ ಎಂದು ಪಕ್ಷದ ಹಿರಿಯ ನಾಯಕ ಶ್ಯಾಮ್ ರಜಾಕ್ ಹೇಳಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ತಮ್ಮ ನಿವಾಸದಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ಸಚಿವರೊಂದಿಗೆ ಸಮಾಲೋಚಿಸಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರನ್ನು ಘೋಷಿಸಿದ್ದೇ ಆದರೆ, ಇನ್ನೆರಡು ಮೂರು ದಿನಗಳೊಳಗೆ ಮೈತ್ರಿಕೂಟದಿಂದ ಹೊರಬರುವ ಕುರಿತು ಜೆಡಿಯು ತೀರ್ಮಾನ ಕೈಗೊಂಡಿರುವುದಾಗಿ ತಿಳಿದುಬಂದಿದೆ.

ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸಿದ ನಂತರ ಅಧಿಕೃತ ಘೋಷಣೆ ಮಾಡುವುದಾಗಿ ಜೆಡಿಯುನ ಅಧ್ಯಕ್ಷ ಶರದ್ ಯಾದವ್ ತಿಳಿಸಿದ್ದು, ಜೆಡಿಯು ತನ್ನ ಅಂತಿಮ ನಿರ್ಧಾರವನ್ನು ಗುರುವಾರ ಬಹಿರಂಗವಾಗಿ ಘೋಷಿಸಲಿದ್ದೇವೆ ಎಂದು ಹೇಳಿದರು.

ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ಅವರಿಗೆ ಪಕ್ಷದ ಚುನಾವಣಾ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದರಿಂದ ಬೇಸರಗೊಂಡು ಪಕ್ಷದ ಹಿರಿಯ ನಾಯಕ ಆಡ್ವಾಣಿ ಅವರು ಸೋಮವಾರ ಪಕ್ಷದ ಎಲ್ಲಾ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಹಿರಿಯ ನಾಯಕರ ಮನವೊಲಿಕೆ ಮಣಿದು ಆಡ್ವಾಣಿ ಅವರು ರಾಜಿನಾಮೆಯನ್ನು ಹಿಂಪಡೆದಿದ್ದರು. ಇದೀಗ ಜೆಡಿಯು ಮೈತ್ರಿಕೂಟದಿಂದ ಹೊರಬರುವ ಸೂಚನೆ ನೀಡಿರುವುದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.