ಮುಂಬೈನಲ್ಲಿ ಮತ್ತೊಂದು ಕಟ್ಟಡ ಕುಸಿದು ನಾಲ್ವರು ಸಾವು

ಮುಂಬೈ: ಮುಂಬೈನಲ್ಲಿ ಕಟ್ಟಡಗಳ ಕುಸಿತ ಸರಣಿ ಮುಂದುವರೆದಿದ್ದು, ಶನಿವಾರ ಬೆಳಗಿನ ಜಾವ ನಾಲ್ಕು ಹಂತಸ್ತಿನ ಹಳೆ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ದಹಿಸರ್‌ನಲ್ಲಿ ಇಂದು ಬೆಳಗಿನ ಜಾವ 6.30ರ ಸುಮಾರಿಗೆ ಸಂಪೂರ್ಣ ಶಿಥಿಲಗೊಂಡಿದ್ದ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ವಿಪತ್ತು ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹತ್ತು ದಿನಗಳಲ್ಲಿ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಭವಿಸುತ್ತಿರುವ ಮೂರನೇ ಘಟನೆ ಇದಾಗಿದೆ. ನಿನ್ನೆಯಷ್ಟೇ ಥಾಣೆಯಲ್ಲಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಆರು ಮಕ್ಕಳು ಸೇರಿದಂತೆ 10 ಮಂದಿ ಮೃತಪಟ್ಟಿದ್ದರು. ಇನ್ನು ಜೂನ್ 10ರಂದು ಮಹಿಮ್‌ನಲ್ಲಿ ನಾಲ್ಕು ಮಹಡಿಯ ಹಳೆಯ ಕಟ್ಟಡವೊಂದು ಕುಸಿದು ಬಿದ್ದು 10 ಮಂದಿ ಮೃತಪಟ್ಟಿದ್ದರು ಮತ್ತು ಆರು ಮಂದಿ ಗಾಯಗೊಂಡಿದ್ದರು. ಏಪ್ರಿಲ್ 4ರಂದು ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದು 74 ಮಂದಿ ಮೃತಪಟ್ಟಿದ್ದರು.
ಈ ಎಲ್ಲ ಘಟನೆಗಳು ಹಸಿರಾಗಿರುವಾಗಲೇ ಈಗ ಮತ್ತೊಂದು ಕಟ್ಟಡ ದುರಂತ ಸಂಭವಿಸಿದ್ದು, ದುರಂತದಲ್ಲಿ ಮೃತಪಟ್ಟವರಲ್ಲಿ ಇಬ್ಬರನ್ನು ಫೈಝಾನ್ ಶೇಖ್ ಮತ್ತು ಧರ್ಮೇಂದ್ರ ಹರಿಜನ್ ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡ ಮೂವರನ್ನು ಭಗವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈವರೆಗೆ ಕಟ್ಟಡದ ಅವಶೇಷಗಳಡಿಯಿಂದ ಐವರನ್ನು ರಕ್ಷಿಸಲಾಗಿದೆ. ಆದರೆ ಕಟ್ಟಡದ ಅವಶೇಷಗಳಡಿ ಇನ್ನು ಎಷ್ಟು ಜನ ಸಿಕ್ಕಿಹಾಕಿಕೊಂಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


