ಬೆಂಗಳೂರು ಬಳಿ ಕಾಡಾನೆ ದಾಳಿ: ಇಬ್ಬರಿಗೆ ಗಾಯ

ಬೆಂಗಳೂರು: ಆಹಾರ ಹರಸಿ ಕಾಡಿನಿಂದ ನಾಡಿಗೆ ಬಂದಿರುವ 8 ಕಾಡಾನೆಗಳ ಹಿಂಡು ಬೆಂಗಳೂರು ವಲಯದ ಹುಸ್ಕೂರು ಕೆರೆಯ ಜಾಲಿ ಪೊದೆಗಳಲ್ಲಿ ಬೀಡು ಬಿಟ್ಟಿದ್ದು, ಕಾಡಾನೆಗಳನ್ನು ನೋಡಲು ಮುಂದಾದ ಸಂದರ್ಭ ಕಾಡಾನೆ ದಾಳಿಗೆ ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸರ್ಜಾಪುರ ಸುತ್ತಮುತ್ತಲು ಸುಮಾರು 12 ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದವು ಆದರೆ ಇದೀಗ 8 ಕಾಡಾನೆಗಳು ಹುಸ್ಕೂರು ಕೆರೆಯಲ್ಲಿ ಬೀಡು ಬಿಟ್ಟಿವೆ. ಹೀಗಾಗಿ ಕಾಡಾನೆಗಳು ಪೊದೆಗಳಿಂದ ಹೊರಗಡೆ ಬರದಂತೆ ಕೆರೆಯ ಸುತ್ತಲು ನಾಕಾಬಂದಿ ರೀತಿಯಲ್ಲಿ ಅರಣ್ಯ ಸಿಬ್ಬಂದಿ ಸುತ್ತುವರೆದಿದ್ದಾರೆ.
ಹುಸ್ಕೂರು ಕೆರೆಯ ಜಾಲಿ ಪೊದೆಗಳಲ್ಲಿ ಮುಖ ಮಾಡಿರುವ ಕಾಡಾನೆಗಳನ್ನು ಕಾಣಲು ಸ್ಥಳೀಯರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದಾರೆ. ಇದರಿಂದ ಆನೆಗಳು ಗಾಬರಿಗೊಂಡಿದ್ದು, ಜನರನ್ನು ಚದುರಿಸಲು ಸಿಬ್ಬಂದಿ ಲಾಠಿಚಾರ್ಜ್ ಮಾಡಿದರು ಸಹ ದೂರ ಸರಿಯದೆ ಆನೆಗಳನ್ನು ಕಾಣಲು ಮುಂದಾದ ಕಾಚಮಾರಕನಹಳ್ಳಿ ಮುನಿರಾಜು ಎಂಬಾತ ಕಾಡಾನೆ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದಾನೆ. ಹೀಗಾಗಿ ಜನರ ಆನೆಗಳ ಹಿಂಡಿನ ಬಳಿ ಹೋಗದಂತೆ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.
ಆನೆಗಳನ್ನು ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬನ್ನೇರುಘಟ್ಟ ಸೇರಿದಂತೆ ಬೆಂಗಳೂರಿನ ಇತರ ಅರಣ್ಯ ವಲಯದ ಸುಮಾರು 300 ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಅರಣ್ಯ ಸಿಬ್ಬಂದಿ ಆನೆಗಳನ್ನು ಬನ್ನೇರುಘಟ್ಟದ ಕಾಡಿಗೆ ಅಥವಾ ತಮಿಳುನಾಡಿದ ಡೆಂಕಣಿಕೋಟೆ ಕಾಡಿಗೆ ಓಡಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಆನೆಗಳು ಎರಡು ಹಿಂಡುಗಳಾಗಿ ಚದುರಿವೆ. ಹೀಗಾಗಿ ಕಾಡಾನೆಗಳ ಹಿಂಡನ್ನು ಒಟ್ಟುಗೂಡಿಸಿ ನಂತರ ಕಾಡಿಗೆ ಹಟ್ಟಲು ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.
ಬೆಳಗಿನ ಹೊತ್ತಿನಲ್ಲಿ ಜನ ಸಂಚಾರವಿರುವುದರಿಂದ ಆನೆಗಳನ್ನು ಓಡಿಸುವ ಸಂದರ್ಭದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಇರುವುದರಿಂದ ಆನೆಗಳನ್ನು ಕಾಡಿಗೆ ಓಡಿಸುವುದು ಸೂಕ್ತವಲ್ಲ. ಹೀಗಾಗಿ ರಾತ್ರಿ ನಂತರ ಕಾರ್ಯಚರಣೆಗೆ ಸಿಬ್ಬಂದಿ ಮುಂದಾಗಲಿದ್ದಾರೆ. ಅಲ್ಲದೆ ಆನೆಗಳನ್ನು ಸುರಕ್ಷಿತವಾಗಿ ಕಾಡಿಗಟ್ಟಲು ಮೈಸೂರಿನಿಂದ ದಸರಾ ಆನೆಗಳಾದ ಗಜೇಂದ್ರ, ಶ್ರೀರಾಮನನ್ನು ಕರೆಸಿಕೊಳ್ಳುತ್ತಿದ್ದೇವೆ ಎಂದು ಆನೇಕಲ್ ಅರಣ್ಯ ವಲಯಾಧಿಕಾರಿ ನಾಗಭೂಷಣ್ ಹೇಳಿದ್ದಾರೆ.
ಕಾಡಾನೆ ದಾಳಿಗೆ ಕೋಲಾರದಲ್ಲಿ ಮೂವರು ಹಾಗೂ ಹೊಸಕೋಟೆಯಲ್ಲಿ 1 ಮೃತಪಟ್ಟಿದ್ದಾರೆ. ಸದ್ಯ ಹುಸ್ಕೂರು ಬಳಿ ಕಾಡಾನೆಗೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಆನೆಗಳನ್ನು ನೋಡಲು ಜನರು ಮುಂದಾಗದಂತೆ ಅರಣ್ಯ ಸಿಬ್ಬಂದಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


