ಈಗಿನ ಸುದ್ದಿ

ಮುಷರಫ್ ವಾಪಸ್ಸಾಗುತ್ತಿದ್ದಂತೆ ಬಂಧನ...?

Published On :

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಫರ್ವೇಜ್ ಮುಷರಫ್ ಅವರು ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಮಾರ್ಚ್ 16ಕ್ಕೆ ಆಡಳಿತಾರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ನೇತೃತ್ವದ ಸರ್ಕಾರದ ಆಡಳಿತ ಕೊನೆಗೊಳ್ಳಲ್ಲಿದ್ದು, ಈಗಾಗಲೇ ಪಾಕಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆಯ ದಿನಾಂಕ ಕೂಡ ನಿಗದಿಯಾಗಿದೆ. ಈ ಹಿನ್ನಲೆಯಲ್ಲಿ ಸೌದಿಯಲ್ಲಿ ನೆಲೆಸಿರುವ ಮಾಜಿ ಅಧ್ಯಕ್ಷರಾದ ಮುಷರಫ್ ಅವರು ತಮ್ಮ ಸ್ವದೇಶಕ್ಕೆ ಹಿಂದಿರುಗಲು ನಿರ್ಧರಿಸಿದ್ದರು. ಆದರೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದ ಮುಷರಫ್ ಅವರಿಗೆ ಆರಂಭದಲ್ಲಿಯೇ ಹಿನ್ನಡೆಯಾಗಿದೆ.

ಪಾಕಿಸ್ತಾನದ ನ್ಯಾಯಾಲಯಗಳಲ್ಲಿ ಮುಷರಫ್ ವಿರುದ್ಧ ದಾಖಲಾಗಿರುವ ಪ್ರಕರಣಗಳಿಂದಾಗಿ ಅವರು ಪಾಕಿಸ್ತಾನಕ್ಕೆ ಹಿಂದಿರುಗಿತ್ತಿದ್ದಂತೆಯೇ ಅವರನ್ನು ಬಂಧಿಸುವ ಸಾಧ್ಯತೆಗಳೇ ಹೆಚ್ಚಾಗಿದೆ.

'ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಭಯೋತ್ಪಾದನಾ ನಿಗ್ರಹ ಕಾಯ್ದೆಗಳ ಅಡಿಯಲ್ಲಿ ಮುಷರಫ್ ವಿರುದ್ದ ಹಲವು ದೂರುಗಳ ದಾಖಲಾಗಿದ್ದು, ಅವರಿಗೆ ವಾರೆಂಟ್‌ಗಳನ್ನು ಕೂಡ ಜಾರಿ ಮಾಡಲಾಗಿತ್ತು. ಆದರೆ ಸೌದಿಯಲ್ಲಿ ಆಶ್ರಯ ಪಡೆದಿರುವ ಅವರು ನ್ಯಾಯಾಲಯದ ಯಾವೊಂದು ಕಲಾಪಕ್ಕೂ ಖುದ್ದು ಹಾಜರಾಗದೇ ವಕೀಲರ ಮುಖೇನ ಉತ್ತರಿಸುತ್ತಿದ್ದರು. ಹೀಗಾಗಿ ಅವರನ್ನು ಶೀಘ್ರದಲ್ಲಿಯೇ ಅಂದರೆ ಅವರು ಪಾಕಿಸ್ತಾನಕ್ಕೆ ವಾಪಸಾಗುತ್ತಿದ್ದಂತೆ ಅವರನ್ನು ಬಂಧಿಸಲಾಗುತ್ತದೆ' ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್‌ನ ಸರ್ಕಾರಿ ಅಭಿಯೋಜಕರಾದ ಚೌದರಿ ಜುಲ್ಫಿಕರ್ ಅಲಿ ತಿಳಿಸಿದ್ದಾರೆ.

ಪಾಕಿಸ್ತಾನ ಮಾಜಿ ಅಧ್ಯಕ್ಷ ಮುಷರಫ್ ವಿರುದ್ದ ಭ್ರಷ್ಟಾಚಾರ, ಆಡಳಿತ ದುರುಪಯೋಗದಂತಹ ಗಂಭೀರ ಪ್ರಕರಣಗಳು ಸೇರಿದಂತೆ ಪಾಕ್ ಮಾಜಿ ಅಧ್ಯಕ್ಷೆ ಬೆನಜೀರ್ ಭುಟ್ಟೋ ಅವರಿಗೆ ಉದ್ದೇಶ ಪೂರ್ವಕವಾಗಿಯೇ ಸೂಕ್ತ ರಕ್ಷಣೆ ಒದಗಿಸದ ಕುರಿತೂ ಸಹ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಮುಷರಫ್ ಅವರ ಆಸೆ ಕಮರುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.