'ದಿ ಟೆಸ್ಟ್ ಆಫ್ ಮೈ ಲೈಫ್' ಪುಸ್ತಕ ಹರಾಜು ನಾಳೆ

ನವದೆಹಲಿ: ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ "ಆತ್ಮಚರಿತ್ರೆ" ನಾಳೆ ಆನ್ ಲೈನ್ ಹರಾಜು ಪ್ರಕ್ರಿಯೆ ಮೂಲಕ ಲೋಕಾರ್ಪಣೆಗೊಳ್ಳಲಿದೆ.
ಕ್ರಿಕೆಟಿಗ ಯುವರಾಜ್ ಸಿಂಗ್ ರ ಜೀವನ ಆಧಾರಿತ ಲೇಖನ ಹೊಂದಿರುವ ಕೃತಿ "ದಿ ಟೆಸ್ಟ್ ಆಫ್ ಮೈ ಲೈಫ್" ನ 20 ಪ್ರತಿಗಳು ನಾಳೆ ಲೋಕಾರ್ಪಣೆಗೊಳ್ಳಲಿವೆ. ಯುವರಾಜ್ ಸಿಂಗ್ ಬದುಕಿನ ಸವಾಲಿನ ದಿನಗಳು, ವಿಶ್ವಕಪ್ ನ ಯಶಸ್ವೀ ಯಾತ್ರೆ ಮತ್ತು ವಿಶ್ವಕಪ್ ಸಂಭ್ರಮದ ನೆರಳಲ್ಲೇ ಕ್ಯಾನ್ಸರ್ ಗೆ ತುತ್ತಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಅನುಭವಿಸಿದ ನೋವಿನ ತುಮುಲಗಳನ್ನು ಈ ಪುಸ್ತಕದಲ್ಲಿ ಚಿತ್ರಿಸಲಾಗಿದೆ.
ಅಲ್ಲದೆ ಸ್ವತಃ ಯುವರಾಜ್ ಸಿಂಗ್ ಅವರು ತಮ್ಮ ಕೈ ಬರಹದಲ್ಲಿ ಬರೆದಿರುವ ಸುಮಾರು 20 ಪುಟಗಳನ್ನು ಈ ವಿಶೇಷ ಪ್ರತಿಗಳಲ್ಲಿ ಸೇರಿಸಲಾಗಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳಲ್ಲಿ ನಾಳೆ ಹೊರಬರಲಿರುವ ಈ ಕೃತಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ.
"ನಾನು ಯಾವಾಗಲೂ ಸಕಾರಾತ್ಮಕವಾಗಿರುತ್ತೇನೆ. ಹೋರಾಟದಲ್ಲಿ ನಂಬಿಕೆ ಇಟ್ಟವನು ನಾನು. ಜೀವನದಲ್ಲಿ ಎದುರಾಗುವ ಯಾವುದೇ ಸವಾಲಿಗೂ ನಾವು ಸೋಲಬಾರದು. ಸೋತರೂ ಅದು ಹೋರಾಟದಿಂದ ಕೂಡಿರಬೇಕು. ನನ್ನಂತೆಯೇ ಜೀವನದಲ್ಲಿ ಹೊರಾಡುತ್ತಿರುವ ಸಾವಿರಾರು ಮಂದಿಗೆ ಈ ಪುಸ್ತಕ ಸ್ಫೂರ್ತಿಯಾಗಬಹುದು. ಇದೊಂದೇ ನಾನು ಅವರಿಗೆ ಕೊಡಲು ಸಾಧ್ಯ' ಎಂದು ಯುವಿ ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಲ್ಲದೆ "ಪುಸ್ತಕ ಮಾರಾಟದಿಂದ ಬರುವ ಅಷ್ಟೂ ಹಣವನ್ನು "ಯು ವಿ ಕ್ಯಾನ್" ಸಂಘಟನೆಗೆ ನೀಡುತ್ತೇವೆ. ಈ ಸಂಘಟನೆಯು ಕ್ಯಾನ್ಸರ್ ಗೆ ತುತ್ತಾಗಿ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿರುವವರನ್ನು ಗುರುತಿಸಿ ಅವರಿಗೆ ನೆರವಾಗುತ್ತದೆ. ಆ ಮೂಲಕ ನಾವು ಅವರೊಂದಿಗಿದ್ದೇವೆಂಬ ಧೈರ್ಯವನ್ನು ರೋಗಿಗಳಲ್ಲಿ ತುಂಬುತ್ತದೆ. ರೋಗಿಯಲ್ಲಿ ಧೈರ್ಯ ತುಂಬಿದರೆ ಸಾಕು ಆತ ಅರ್ಧ ರೋಗವನ್ನು ಗೆಲ್ಲುತ್ತಾನೆ ಎಂದು ಯುವರಾಜ್ ಹೇಳಿದರು.
ನಾಳೆ ನಡೆಯಲಿರುವ "ದಿ ಟೆಸ್ಟ್ ಆಫ್ ಮೈ ಲೈಫ್" ಪುಸ್ತಕದ ಹರಾಜಿನ ಆರಂಭಿಕ ಬೆಲೆ 5000 ರು.ಗಳಾಗಿದ್ದು, ಅತಿ ಹೆಚ್ಚು ಮೊತ್ತಕ್ಕೆ ಪುಸ್ತಕಗಳು ಹರಾಜಾಗುವ ನಿರೀಕ್ಷೆ ಹೊಂದಲಾಗಿದೆ. "ರಾಂಡಮ್ ಹೌಸ್" ಈ ಪುಸ್ತಕದ ಪ್ರಕಾಶನ ಸಂಸ್ಥೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


