ಡಿವೈಎಸ್‌ಪಿ ಹತ್ಯೆ: ಮಾಹಿತಿಗಾಗಿ ಗ್ರಾಮಸ್ಥರಲ್ಲಿ ಸಿಬಿಐ ಮನವಿ

ಲಕ್ನೋ: ಉತ್ತರ ಪ್ರದೇಶದ ಡಿವೈಎಸ್‌ಪಿ ಜಿಯಾ-ಉಲ್-ಹಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಮಾಹಿತಿಗಾಗಿ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಉತ್ತರ ಪ್ರದೇಶದ ಕುಂಡಾ ಗ್ರಾಮದ ಪಂಚಾಯ್ತಿ ಕಚೇರಿಯಲ್ಲಿ ಮೊಕ್ಕಾಂ ಹೂಡಿರುವ ಸಿಬಿಐ ಅಧಿಕಾರಿಗಳು ಹತ್ಯೆ ಕುರಿತ ಮಾಹಿತಿ ನೀಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ಅಧಿಕಾರಿ ಜಿಯಾ-ಉಲ್-ಹಕ್ ಅವರ ಹತ್ಯೆಯ ಹಿಂದೆ ಪ್ರಭಾವಿ ರಾಜಕಾರಣಿ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾಭಯ್ಯಾ ಅವರ ಹೆಸರು ಕೇಳಿಬರುತ್ತಿರುವುದರಿಂದ ಗ್ರಾಮಸ್ಥರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಆದರೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಗ್ರಾಮಸ್ಥರ ಬಳಿ ಮಾಹಿತಿ ಕಲೆ ಹಾಕಲು ಹೆಣಗಾಡುತ್ತಿದ್ದಾರೆ. ಹತ್ಯೆ ಕುರಿತು ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ ತಮ್ಮ ಕಚೇರಿ ದೂರವಾಣಿ ಸಂಖ್ಯೆ 05341-230006ಕ್ಕೆ ಕರೆ ಮಾಡುವಂತೆ ಅಥವಾ spscu1del@cbi.gov.in ಕ್ಕೆ ಈ ಮೇಲ್ ಮಾಡುವಂತೆ ಕೇಳುತ್ತಿದ್ದಾರೆ.
ಸಾಕ್ಷಿ ಹೇಳಬಯಸುವ ವ್ಯಕ್ತಿಯ ಮನೆಗಾಗಲೀ ಅಥವಾ ಆತನ ಹೆಸರನ್ನಾಗಲೀ ನಾವು ಗೌಪ್ಯವಾಗಿಡುತ್ತೇವೆ. ಅಲ್ಲದೆ ವಿಚಾರಣೆ ನೆಪದಲ್ಲಿ ತಮ್ಮನ್ನು ಪದೇ ಪದೇ ಕರೆಸಿಕೊಳ್ಳುವುದಿಲ್ಲ ಎಂದೂ ಸಿಬಿಐ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಸಿಬಿಐ ಅಧಿಕಾರಿಗಳ ಯಾವುದೇ ಭರವಸೆಯನ್ನೂ ಗ್ರಾಮಸ್ಥರು ನಂಬುತ್ತಿಲ್ಲ. ಬದಲಿಗೆ ತಮ್ಮ ಗ್ರಾಮದಲ್ಲಿ ನಡೆದ ಬೀಕರ ಹತ್ಯೆಯನ್ನು ತಾವು ಯಾರೂ ನೋಡಿಲ್ಲ ಎಂದು ವಾದಿಸುತ್ತಿದ್ದಾರೆ.
ಒಟ್ಟಾರೆ ಉತ್ತರ ಪ್ರದೇಶದ ಮಟ್ಟಿಗೆ ತೀವ್ರ ಕುತೂಹಲ ಕೆರಳಿಸಿರುವ ಡಿವೈಎಸ್‌ಪಿ ಜಿಯಾ-ಉಲ್-ಹಕ್ ಅವರ ಹತ್ಯೆ ಪ್ರಕರಣ ಕುರಿತ ಮಾಹಿತಿ ಸಂಗ್ರಹಣೆಗಾಗಿ ಸಿಬಿಐ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. ಪ್ರಭಾವಿ ರಾಜಕಾರಣಿಯೊಬ್ಬನಿಗೆ ಹೆದರಿ ಗ್ರಾಮಸ್ಥರು ಸತ್ಯಾಂಶ ಮರೆಮಾಚುತ್ತಿರುವುದು ನಮ್ಮ ದೇಶದ ಪ್ರಜಾಪ್ರಭುತ್ವ ಆಡಳಿತಕ್ಕೆ ಹಿಡಿದ ಕನ್ನಡಿ ಎನ್ನಬಹುದೇ..?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


