ಅಳಿಯನಿಂದ ಲಂಚ: ಬನ್ಸಲ್ ರಾಜಿನಾಮೆ?

ನವದೆಹಲಿ: ತಮ್ಮ ಸೋದರಳಿಯ 90 ಲಕ್ಷ ರುಪಾಯಿ ಲಂಚ ಪಡೆದು ಸಿಬಿಐಗೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆ ಇದೆ.
ಲಂಚ ಪಡೆದ ಆರೋಪದ ಮೇಲೆ ಬನ್ಸಾಲ್ ಅವರ ಅಳಿಯನನ್ನು ಸಿಬಿಐ ಬಂಧಿಸುತ್ತಿದ್ದಂತೆ, ಪ್ರತಿಪಕ್ಷಗಳು ಬನ್ಸಲ್ ಅವರ ರಾಜಿನಾಮೆಗೆ ಆಗ್ರಹಿಸಿವೆ.
ಈ ಮಧ್ಯೆ ಬನ್ಸಲ್ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ತೆರಳಿ, ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದು, ಪ್ರಧಾನಿ ರಾಜಿನಾಮೆ ನೀಡುವಂತೆ ಬನ್ಸಲ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಭೇಟಿ ಬಳಿಕ ವರದಿಗಾರರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಬನ್ಸಲ್ ನಿರಾಕರಿಸಿದರು.
ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಕಾಂಗ್ರೆಸ್, ಪ್ರಕರಣದ ಬಗ್ಗೆ ಮತ್ತು ಬನ್ಸಲ್ ಅವರಿಂದ ರಾಜಿನಾಮೆ ಪಡೆಯುವ ಬಗ್ಗೆ ಚರ್ಚಿಸಲು ಇಂದು ಸಂಜೆ 5.30ಕ್ಕೆ ಪಕ್ಷದ ಕೋರ್ ಕಮಿಟಿ ಸಭೆ ಕರೆದಿದೆ. ಈ ಸಭೆಯಲ್ಲಿ ಬನ್ಸಲ್ ರಾಜಿನಾಮೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ರೇಲ್ವೆ ಸಿಬ್ಬಂದಿಗೆ ಬಡ್ತಿ ಕೊಡಿಸುವುದಾಗಿ ಹೇಳಿ 90 ಲಕ್ಷ ರುಪಾಯಿ ಲಂಚ ಪಡೆದ ಆರೋಪದ ಮೇಲೆ ಬನ್ಸಲ್ ಅವರ ಸೋದರಳಿಯ ವಿಜಯ್ ಸಿಂಗ್ಲಾರನ್ನು ಶುಕ್ರವಾರ ಸಿಬಿಐ ಬಂಧಿಸಿದೆ. ರೇಲ್ವೆ ಮಂಡಳಿ ಸದಸ್ಯ ಮಹೇಶ್ ಕುಮಾರ್ ನೀಡಿದ ಮಾಹಿತಿಯಂತೆ ಸಿಂಗ್ಲಾರನ್ನು ಬಂಧಿಸಲಾಗಿದೆ.
90 ಲಕ್ಷ ಹಣ ಕೊಂಡೊಯ್ಯುತ್ತಿದ್ದಾಗ ಮಹೇಶ್ ಕುಮಾರ್‌ರನ್ನು ಮುಂಬೈನಲ್ಲಿ ಸಂಜೆ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಸಿಂಗ್ಲಾರನ್ನು ಬಂಧಿಸಲಾಗಿದೆ. ಬೇರೆಡೆ ಪೋಸ್ಟಿಂಗ್ ಮಾಡಿಸಿಕೊಳ್ಳಲು ಸಿಂಗ್ಲಾ ಹಾಗೂ ಇನ್ನೊಬ್ಬ ವ್ಯಕ್ತಿಗೆ ಲಂಚ ನೀಡಲು ಈ ಹಣ ಕೊಂಡೊಯ್ಯುತ್ತಿದ್ದುದಾಗಿ ಮಹೇಶ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಮಹೇಶ್ ಪಶ್ಟಿಮ ರೇಲ್ವೆಯ ಜನರಲ್ ಮ್ಯಾನೇಜರ್ ಆಗಿ ಸೇವೆಸಲ್ಲಿಸಿದ್ದರು. ಗುರುವಾರವಷ್ಟೇ ಅವರು ರೇಲ್ವೆ ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು.
ಇನ್ನು ಬಗ್ಗೆ ಪ್ರತಿಕ್ರಿಯಿಸಿರುವ ಬನ್ಸಲ್ ಅವರು, ಇದರಲ್ಲಿ ನನ್ನದೇನು ತಪ್ಪಿಲ್ಲ. ನನ್ನ ಹಾಗೂ ಅಳಿಯ ಸಿಂಗ್ಲಾ ಅವರ ಮಧ್ಯೆ ಯಾವುದೇ ವ್ಯವಹಾರ ನಡೆದಿಲ್ಲ. ಈ ಸಂಬಂಧ ತಾವು ಸಿಬಿಐ ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


