ಟಾಡಾ ಕೋರ್ಟ್ಗೆ ಸಂಜಯ್ ದತ್ ಶರಣು

ಮುಂಬೈ: 1993 ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ, ಬಾಲಿವುಡ್ ನಟ ಸಂಜಯ್ ದತ್ ಗುರುವಾರ ಟಾಡಾ ಕೋರ್ಟ್ಗೆ ಶರಣಾಗಿದ್ದಾರೆ.
ನ್ಯಾಯಾಲಯಕ್ಕೆ ಶರಣಾಗಲು ಬಾಂದ್ರಾದಲ್ಲಿರುವ ನಿವಾಸದಿಂದ ಹೊರಟ ಸಂಜಯ್ ದತ್ ಮುಗುಳ್ನಗುತ್ತಾ ಮಾಧ್ಯಮದರಿಗೆ ಕೈ ಬೀಸಿ ವಿಶ್ ಮಾಡಿದ್ದಾರೆ.
ಕೋರ್ಟ್ಗೆ ಹೊರಡುವಾಗ ಬಿಳಿಯ ಕುರ್ತಾ ಪೈಜಾಮಾ ಧರಿಸಿದ್ದ 53ರ ಹರೆಯದ ದತ್ ಜತೆ ಆತನ ಪತ್ನಿ ಮನ್ಯತಾ, ಸಹೋದರಿ ಪ್ರಿಯಾದತ್ ಹಾಗು ಮಹೇಶ್ ಭಟ್, ಅಪೂರ್ವ ಲಾಖಿಯಾ ಮೊದಲಾದ ಗೆಳೆಯರು ಇದ್ದರು.
ಸಂಜಯ್ ದತ್ ಶರಣಾಗತಿ ಆದ ನಂತರ ಅವರನ್ನು ಮೊದಲು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು. ತದನಂತರ ಪುಣೆಯಲ್ಲಿರುವ ಯೆರ್ವಾಡಾ ಜೈಲಿಗೆ, ನಾಶಿಕ್ ಅಥವಾ ನಾಗ್ಪುರ್ ಜೈಲಿಗೆ ರವಾನಿಸಲಾಗುವುದು. ಈ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಲು ಪೊಲೀಸರು ತಯಾರಾಗಿಲ್ಲ.
1993ರ ಸರಣಿ ಬಾಂಬ್ ಸ್ಫೋಟದ ಆರೋಪಿಯಾಗಿರುವ ದತ್ಗೆ ನ್ಯಾಯಾಲಯ 42 ತಿಂಗಳುಗಳ ಜೈಲು ಶಿಕ್ಷೆ ವಿಧಿಸಿದೆ. ಆದಾಗ್ಯೂ, ಅರ್ಥರ್ ರೋಡ್ ಜೈಲಿನಲ್ಲಿ ಸಂಜಯ್ ದತ್ಗೆ ಜೀವ ಬೆದರಿಕೆ ಇದೆ ಎಂದು ಬುಧವಾರ ಅನಾಮಧೇಯ ಪತ್ರವೊಂದು ಬಂದಿದ್ದು, ದತ್ಗೆ ಜೈಲಿನಲ್ಲಿಯೂ ಬಿಗಿ ಭದ್ರತೆಯನ್ನೊದಗಿಸಲಾಗಿದೆ.
ದತ್ ಕೋರ್ಟ್ ಆವರಣಕ್ಕೆ ಬಂದಾಗ ಮಾಧ್ಯಮದವರು, ಫೋಟೋಗ್ರಾಫರ್ಗಳು ದತ್ರನ್ನು ಮಾತನಾಡಿಸಲು ಮುಗಿಬಿದ್ದ ದೃಶ್ಯ ಕೋರ್ಟ್ ಆವರಣದಲ್ಲಿ ಕಂಡು ಬಂತು. ಆವಾಗ ದತ್ ಜತೆಗೆ ಬಂದಿದ್ದ ಮಹೇಶ್ ಭಟ್, ಮಾಧ್ಯಮದವರು ದತ್ಗೆ ಕೋರ್ಟ್ಗೆ ಹೋಗಲು ಅನುವು ಮಾಡಿಕೊಡಿ ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ಸ್ಪಲ್ಪ ಸಮಯ ನೂಕು ನುಗ್ಗಲಿನ ನಂತರ ದತ್ರನ್ನು ಕೋರ್ಟ್ಗೆ ಕರೆದೊಯ್ಯುವಲ್ಲಿ ಭಟ್ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


