ಸ್ಪಾಟ್ ಫಿಕ್ಸಿಂಗ್ ಬಗ್ಗೆ ಸಾಕ್ಷ್ಯ ಬಯಲು
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಬಂಧಿತರಾಗಿರುವ ರಾಜಸ್ತಾನ್ ರಾಯಲ್ಸ್ ತಂಡದ ವೇಗಿ ಶ್ರೀಶಾಂತ್ ಹಾಗು ಇನ್ನಿಬ್ಬರು ಆಟಗಾರರಾದ ಅಂಕಿತ್ ಚೌವಾಣ್ ಮತ್ತು ಅಜಿತ್ ಚಾಂಡೀಲಾ ಮೋಸದಾಟದ ಸಾಕ್ಷ್ಯಗಳನ್ನು ದೆಹಲಿ ಪೊಲೀಸರು ಬಯಲು ಮಾಡಿದ್ದಾರೆ.
ವಿದೇಶದಲ್ಲಿನ ಭೂಗತ ಲೋಕದವರೊಂದಿಗೆ ನಂಟು ಇರಿಸಿದ ಬುಕ್ಕಿಗಳೊಂದಿಗೆ ನಿರಂತರ ಸಂಪರ್ಕ ಕಲ್ಪಿಸಿಕೊಂಡಿದ್ದ ಈ ಆಟಗಾರರು ಪೂರ್ವ ನಿರ್ಧಾರದಂತೆ ಒಂದು ಓವರ್ನಲ್ಲಿ ಇಂತಿಷ್ಟು ರನ್ ಬಿಟ್ಟುಕೊಡಲು 60 ಲಕ್ಷ ರು. ಹಣವನ್ನು ತೆಗೆದುಕೊಂಡಿದ್ದಾರೆ.
ಗುರುವಾರ ಬೆಳಗ್ಗೆ ದೆಹಲಿ ಪೊಲೀಸರು ಈ ಮೂವರು ಆಟಗಾರರನ್ನು ಬಂಧಿಸಿದ್ದು, ಐಪಿಎಲ್ ಪಂದ್ಯಾವಳಿಯಿಂದ ಬಿಸಿಸಿಐ ಇವರನ್ನು ಅಮಾನತುಗೊಳಿಸಿದೆ.
ಇದಾದ ನಂತರ ಗುರುವಾರ ಅಪರಾಹ್ನ ದೆಹಲಿ ಪೊಲೀಸ್ ಕಮಿಷನರ್ ನೀರಜ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದು, ಆಟಗಾರರು ಮತ್ತು ಬುಕ್ಕಿಗಳ ನಡುವಿನ ಫೋನ್ ಸಂಭಾಷಣೆಯ ಸಾಕ್ಷ್ಯವನ್ನು ಬಯಲು ಮಾಡಿದ್ದಾರೆ. ಈ ಪ್ರಕರಣದಲ್ಲಿ 14 ಜನರನ್ನು ಈಗಾಗಲೇ ಬಂಧಿಸಿದ್ದು, ಇನ್ನೂ ಕೆಲವು ಬುಕ್ಕಿಗಳ ಬಂಧನ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದೀಗ ಬಂಧನಕ್ಕೊಳಗಾಗಿರುವ ಆಟಗಾರರು ಮತ್ತು ಬುಕ್ಕಿಗಳನ್ನು ದೆಹಲಿಗೆ ಕರೆತರಲಾಗಿದ್ದು, ಇವರ ವಿರುದ್ಧ ಸೆಕ್ಷನ್ 420 (ಮೋಸ) ಮತ್ತು 120 (ಬಿ) (ವಂಚನೆ) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಅದೇ ವೇಳೆ ಇವರ ವಿರುದ್ಧ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆ್ಯಕ್ಟ್ (ಎಂಸಿಒಸಿಎ) ಅಡಿಯಲ್ಲಿಯೂ ಕೇಸು ದಾಖಲಿಸುವ ಸಾಧ್ಯತೆಯಿದೆ.
ಮೂರು ಐಪಿಎಲ್ ಮ್ಯಾಚ್ಗಳಲ್ಲಿ ಈ ಮೂವರ ಕ್ರಿಕೆಟಿಗರು ಮೋಸದಾಟ ಆಡಿರುವ ಸಾಕ್ಷ್ಯಗಳನ್ನು ಪೊಲೀಸ್ ಕಮಿಷನರ್ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದಾರೆ.
ಕೆಲವೊಂದು ಓವರ್ಗಳಲ್ಲಿ ಇಂತಿಷ್ಟು ರನ್ಗಳನ್ನು ನೀಡುತ್ತೇವೆ ಎಂದು ಆಟಗಾರರು ಬುಕ್ಕಿಗಳ ಜತೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಈ ಒಪ್ಪಂದದಂತೆ ಆಟಗಾರರು ಮೋಸದಾಟವಾಡುವ ಮುನ್ನ ಬುಕ್ಕಿಗಳಿಗೆ ಸಿಗ್ನಲ್ ನೀಡುತ್ತಾರೆ.
ಅಂದರೆ ಟವೆಲ್ನ್ನು ಟ್ರೌಸರ್ಸ್ಗಳಲ್ಲಿ ಸಿಕ್ಕಿಸುವುದು, ಅವುಗಳನ್ನು ಫೀಲ್ಡ್ನಲ್ಲಿರಿಸುವುದು ಅಥವಾ ತಾವು ಧರಿಸಿದ ಶರ್ಟ್ನ್ನು ಕಳಚುವುದು..ಹೀಗೆ ಹಲವಾರು ವಿಧಾನಗಳಲ್ಲಿ ಆಟಗಾರರು ಮೈದಾನದಿಂದಲೇ ಬುಕ್ಕಿಗಳಿಗೆ ಗುಪ್ತವಾಗಿ ಸಂದೇಶ ರವಾನೆ ಮಾಡುತ್ತಾರೆ.
ರಾಜಸ್ತಾನ್ ರಾಯಲ್ಸ್ ತಂಡ ಮೇ 5ರಂದು ಪುಣೆ ವಾರಿಯರ್ಸ್ ವಿರುದ್ಧ, ಮೇ 9 ಕಿಂಗ್ಸ್ ಇಲೆವನ್ ವಿರುದ್ಧ ಹಾಗು ಮೇ 15 ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

