ಈಗಿನ ಸುದ್ದಿ

ಪಿರಿಯಾಪಟ್ಟಣ: ಕಾಂಗ್ರೆಸ್‌ಗೆ ಗೆಲುವು

ಪಿರಿಯಾಪಟ್ಟಣ: ಕಾಂಗ್ರೆಸ್‌ಗೆ ಗೆಲುವು
Published On :

ಮೈಸೂರು: ಬಿಜೆಪಿ ಅಭ್ಯರ್ಥಿ ಅಕಾಲಿಕ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ಅವರು 2000ಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಆರಂಭದಿಂದಲೂ ಅಲ್ಪ ಮತಗಳ ಮುನ್ನಡೆ ಕಾಯ್ದುಕೊಂಡಿದ್ದ ವೆಂಕಟೇಶ್ ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಅವರ ವಿರುದ್ಧ ಒಟ್ಟು 2088 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ನ ಕೆ.ವೆಂಕಟೇಶ್ ಅವರು ಒಟ್ಟು 62,045 ಮತಗಳು ಪಡೆದು ಭರ್ಜರಿ ಜಯ ಗಳಿಸಿದರೆ, ಎರಡನೇ ಸ್ಥಾನದಲ್ಲಿರುವ ಜೆಡಿಎಸ್‌ನ ಕೆ.ಮಹದೇವ್ 59,957 ಮತಗಳು ಹಾಗೂ ಮೂರನೇ ಸ್ಥಾನದಲ್ಲಿದ್ದ ಬಿಎಸ್‌ಆರ್ ಕಾಂಗ್ರೆಸ್‌ನ ಟಿ.ಡಿ.ಗಣೇಶ್ ಅವರು 5, 669 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಕಡೆಯ ಸ್ಥಾನಕ್ಕೆ ಕುಸಿದಿರುವ ಬಿಜೆಪಿಯ ಆರ್.ಟಿ.ಸತೀಶ್ ಅವರು 3,731 ಮತಗಳನ್ನು ಪಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿ ಸಣ್ಣಮೊಗೇಗೌಡರ ನಿಧನದಿಂದಾಗಿ ಚುನಾವಣೆ ಮೇ 28ಕ್ಕೆ ಮುಂದೂಡಿಕೆಯಾಗಿತ್ತು. ಕಳೆದ ಮಂಗಳವಾರ ಶೇ.83.83ರಷ್ಟು ದಾಖಲೆ ಮತದಾನವಾಗಿತ್ತು.

ರಾಜ್ಯದ 223 ಕ್ಷೇತ್ರಗಳಲ್ಲಿ ಮೇ 5ರಂದೇ ಚುನಾವಣೆ ನಡೆದು, ಮೇ 8 ರಂದು ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್- 121 ಸ್ಥಾನ ಪಡೆದು, ಅಧಿಕಾರ ಸೂತ್ರ ಹಿಡಿದಿದ್ದು, ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ತಲಾ 40, ಕೆಜೆಪಿ- 6, ಬಿಎಸ್‌ಆರ್ ಕಾಂಗ್ರೆಸ್- 4, ಇತರರು- 12 ಸ್ಥಾನ ಪಡೆದಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಸಮಾನ ಸ್ಥಾನ ಪಡೆದಿದ್ದರೂ ಮತಗಳಿಕೆಯ ಆಧಾರದ ಮೇಲೆ ಜೆಡಿಎಸ್ ಅಧಿಕೃತ ವಿರೋಧಪಕ್ಷವಾಗಿ ಹೊರಹೊಮ್ಮಿದೆ.

ಈ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣದ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕಾಂಗ್ರೆಸ್ ಗೆದ್ದಿರುವುದರಿಂದ ಆಡಳಿತ ಪಕ್ಷದ ಒಟ್ಟು ಬಲ ಈಗ 122ಕ್ಕೆ ಏರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.