ಮೇವು ತಿಂದ ಲಾಲು 5 ವರ್ಷ ಜೈಲು ಪಾಲು, ಸಂಸದ ಸ್ಥಾನವೂ ರದ್ದು

ರಾಂಚಿ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸೇರಿದಂತೆ ಮೇವು ಹಗರಣದ 45 ದೋಷಿಗಳಿಗೆ ಸಿಬಿಐ ವಿಶೇಷ ಕೋರ್ಟ್ ಗುರುವಾರ ಐದು ಹಂತಗಳಲ್ಲಿ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದು, ಲಾಲುಗೆ 5 ವರ್ಷ, ಜೆಡಿಯು ಸಂಸದ ಜಗದೀಶ್ ಶರ್ಮಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೀಗಾಗಿ ತಕ್ಷಣದಿಂದಲೇ ಲಾಲು ಪ್ರಸಾದ್ ಯಾದವ್ ಹಾಗೂ ಜಗದೀಶ್ ಶರ್ಮಾ ಅವರ ಸಂಸದ ಸ್ಥಾನ ರದ್ದಾಗಲಿದೆ. ಇದರೊಂದಿಗೆ ಎರಡು ದಿನಗಳಲ್ಲಿ ಮೂವರು ಸಂಸದರು ಸಂಸದ ಸ್ಥಾನ ಕಳೆದುಕೊಂಡಂತಾಗಿದೆ.
ಲಾಲು ಪ್ರಸಾದ್, ಮತ್ತೊರ್ವ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಹಾಗೂ ಜೆಡಿಯು ಸಂಸದ ಜಗದೀಶ್ ಶರ್ಮಾ ಸೇರಿದಂತೆ ಒಟ್ಟು 45 ಮಂದಿಯನ್ನು ಸಿಬಿಐ ಕೋರ್ಟ್ ದೋಷಿ ಎಂದು ಕಳೆದ ಸೋಮವಾರ ತೀರ್ಪು ನೀಡಿತ್ತು. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶ ಪ್ರವಾಸ್ ಕುಮಾರ್ ಸಿಂಗ್ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
ಲಾಲುಗೆ 5 ವರ್ಷ ಜೈಲು ಶಿಕ್ಷೆ ಹಾಗೂ 25 ಲಕ್ಷ ರುಪಾಯಿ ದಂಡ, ಮಿಶ್ರಾಗೆ ನಾಲ್ಕು ವರ್ಷ ಜೈಲು ಹಾಗೂ 2 ಲಕ್ಷ ರುಪಾಯಿ ದಂಡ ವಿಧಿಸಿದರೆ, ಸಂಸದ ಶರ್ಮಾಗೆ ನಾಲ್ಕು ವರ್ಷ ಜೈಲು ಹಾಗೂ 5 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಇನ್ನು ಹಗರಣದಲ್ಲಿ ಭಾಗಿಯಾಗಿದ್ದ ಅಧಿಕಾರಿಳಾದ ಕೆ.ಎಂ.ಪ್ರಸಾದ್ ಹಾಗೂ ಬಿಎಂ ಶರ್ಮಾಗೆ ಐದು ವರ್ಷ ಜೈಲು ಶಿಕ್ಷೆ ಮತ್ತು 1.5ಕೋಟಿ ರುಪಾಯಿ ದಂಡ ವಿಧಿಸಲಾಗಿದೆ.
ಇದಕ್ಕು ಮುನ್ನ ಅಪರಾಧಿಗಳ ಪರ ವಕೀಲರಾದ ಚಿತ್ತರಂಜನ್ ಸಿನ್ಹಾ ಮತ್ತು ಪ್ರವಾಸ್ ಕುಮಾರ್ ಹಾಗೂ ಸರ್ಕಾರಿ ಅಭಿಯೋಜಕ ಬಿಎಂಪಿ ಸಿಂಗ್ ಅವರು ಶಿಕ್ಷೆಯ ಪ್ರಮಾಣದ ಕುರಿತು ತಮ್ಮ ತಮ್ಮ ವಾದವನ್ನು ಮಂಡಿಸಿದರು. ಬಿಹಾರ ಮಾಜಿ ಮುಖ್ಯಮಂತ್ರಿಗಳು ಆಗಿರುವ ಲಾಲು ಪ್ರಸಾದ್ ಯಾದವ್ ಅವರು ಅತ್ಯಂತ ಹಿರಿಯ ನಾಗರಿಕರಾಗಿದ್ದು, ಅವರಿಗೆ ಮೂರು ವರ್ಷಕ್ಕಿಂತ ಕನಿಷ್ಠ ಶಿಕ್ಷೆ ವಿಧಿಸಬೇಕು ಎಂದು ಲಾಲು ಪರ ವಕೀಲರು ಮನವಿ ಮಾಡಿದರು. ಇನ್ನು ಗರಿಷ್ಠ ಶಿಕ್ಷೆ ನೀಡಬೇಕು ಎಂದು ಸಿಬಿಐ ಪರ ವಕೀಲ ಸಿಂಗ್ ವಾದಿಸಿದರು.
ಮೇವು ಹಗರಣಕ್ಕೆ ಸಂಬಂಧಿಸಿದಂತೆ ಇದು ಪ್ರಮುಖ ತೀರ್ಪು ಆಗಿದ್ದು, 1996ರಲ್ಲಿ ಹಗರಣ ಬೆಳಕಿಗೆ ಬಂದಾಗ ಲಾಲು ಪ್ರಸಾದ್ ಯಾದವ್ ಅವರು ಬಿಹಾರ ಮುಖ್ಯಮಂತ್ರಿಯಾಗಿದ್ದರು. 1997ರಲ್ಲಿ ಹಗರಣ ಆರೋಪ ಹೊತ್ತು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ತಮ್ಮ ಪತ್ನಿ ರಾಬ್ಡಿ ದೇವಿ ಅವರನ್ನೇ ಸಿಎಂ ಸ್ಥಾನಕ್ಕೆ ನೇಮಿಸಿ, ಜೈಲಿನಿಂದಲೇ ಅಧಿಕಾರ ನಿರ್ವಹಿಸಿದ್ದರು.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಲಾಲು ಹಾಗೂ ಶರ್ಮಾ ಅವರು ಜೈಲಿನಿಂದ ಬಿಡುಗಡೆಯಾದ ದಿನದಿಂದ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹೀಗಾಗಿ ಈ ಇಬ್ಬರು ನಾಯಕರು ಸಂಸದ ಸ್ಥಾನದೊಂದಿಗೆ 10 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವ ಹಕ್ಕನ್ನು ಸಹ ಕಳೆದುಕೊಂಡಿದ್ದಾರೆ.
ಇದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಾಲು ಪ್ರಸಾದ್ ಅವರ ಆರ್ಜೆಡಿಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ. ಅಪರಾಧಿ ಹಿನ್ನೆಲೆಯ ಸಂಸದ, ಶಾಸಕರನ್ನು ಅನರ್ಹಗೊಳಿಸುವ ಸುಪ್ರೀಂಕೋರ್ಟ್ನ ಜು.10ರ ತೀರ್ಪಿನ ಹಿನ್ನೆಲೆಯಲ್ಲಿ ಜನಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಯನ್ನು ಸರ್ಕಾರ ಈಗಾಗಲೇ ಕೈಬಿಟ್ಟಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅನರ್ಹಗೊಂಡಿರುವ ಮೊದಲ ಸಂಸದ ರಶೀದ್ ಮಸೂದ್ ಆಗಿದ್ದು, ಎರಡನೆಯವರು ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿರುವ ಲಾಲು ಪ್ರಸಾದ್ ಯಾದವ್ ಮತ್ತು ಜೆಡಿಯು ಸಂಸದ ಜಗದೀಶ್ ಶರ್ಮಾ ಮೂರನೆಯವರಾಗಿದ್ದಾರೆ.
ಲಾಲು ವಿರುದ್ಧ ಸಾಬೀತಾದ ಆರೋಪಗಳು:
ಕ್ರಿಮಿನಲ್ ಸಂಚು
ವಂಚನೆ
ಅಮೂಲ್ಯ ಭದ್ರತಾ ಪತ್ರಗಳ ನಕಲು ಹಾಗೂ ವರ್ಗಾವಣೆ
ನಕಲು ಮಾಡುವುದಕ್ಕಾಗಿಯೇ ಮೋಸ
ದಾಖಲೆಗಳನ್ನು ಬಚ್ಚಿಡುವುದು ಮತ್ತು ನಾಶ ಮಾಡಲು ಪ್ರಯತ್ನ
56 ಒಟ್ಟು ಆರೋಪಿಗಳು
07 ಅಸುನೀಗಿದವರು
02 ಮಾಫಿ ಸಾಕ್ಷಿಯಾದವರು
01 ತಪ್ಪೊಪ್ಪಿಕೊಂಡವರು
04 ಐಎಎಸ್ ಅಧಿಕಾರಿಗಳು
06 ರಾಜಕಾರಣಿಗಳು
ಮೇವು ಹಗರಣ ಹಿನ್ನೋಟ
* 1996 ಜನವರಿ- ಪಶುಸಂಗೋಪನಾ ಇಲಾಖೆ ಮೇಲೆ ದಾಳಿ ನಡೆಸಿದ ಮೇಲೆ ಹಗರಣ ಬಹಿರಂಗ . ಅಸ್ತಿತ್ವದಲ್ಲಿ ಇಲ್ಲದ ಸಂಸ್ಥೆಗಳ ಹೆಸರಲ್ಲಿ ಹಣ ಪಡೆದುಕೊಂಡ ಅಕ್ರಮ ಬಯಲು
* 1996 ಮಾ.11- ಪಟನಾ ಹೈಕೋರ್ಟ್ನಿಂದ ಸಿಬಿಐ ತನಿಖೆಗೆ ಆದೇಶ, ಸುಪ್ರೀಂಕೋರ್ಟ್ನಿಂದಲೂ ಸಮ್ಮತಿ
* 1997 ಜೂ.23- ಸಿಬಿಐನಿಂದ ಎಫ್ಐಆರ್ ದಾಖಲು
* 1997 ಜು.30- ಸಿಬಿಐ ಕೋರ್ಟ್ ಮುಂದೆ ಲಾಲು ಯಾದವ್ ಶರಣು
* 2000 ಏ.5- ಸಿಬಿಐ ವಿಶೇಷ ಕೋರ್ಟ್ನಲ್ಲಿ ಆರೋಪಪಟ್ಟಿ ದಾಖಲು
* 2001 ಅ.5- ಹೊಸತಾಗಿ ಜಾರ್ಖಂಡ್ ರಾಜ್ಯ ರಚನೆಯಾದ್ದರಿಂದ ಪ್ರಕರಣಗಳೆಲ್ಲ ಅಲ್ಲಿ ವರ್ಗ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ
* 2002 ಫೆಬ್ರವರಿ- ರಾಂಚಿಯಲ್ಲಿರುವ ಸಿಬಿಐ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ಶುರು
* 2013 ಆ.13- ವಿಶೇಷ ಕೋರ್ಟ್ನ ನ್ಯಾಯಾಧೀಶರನ್ನು ವರ್ಗಾಯಿಸಬೇಕೆಂಬ ಲಾಲು ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್
* 2013 ಸೆ.17- ತೀರ್ಪು ಕಾಯ್ದಿರಿಸಿದ ಕೋರ್ಟ್
* 2013 ಸೆ.30- ಲಾಲು ಯಾದವ್, ಮಿಶ್ರಾ ಸೇರಿ 45 ಮಂದಿ ದೋಷಿ ಎಂದು ಕೋರ್ಟ್ ತೀರ್ಪು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


