ಗಡಿ ಒಳನುಸುಳಲು ಯತ್ನಿಸಿದ ಉಗ್ರರಿಬ್ಬರ ಹತ್ಯೆ

ಶ್ರೀನಗರ: ಜಮ್ಮು-ಕಾಶ್ಮೀರದ ಕೇರನ್ ಸೆಕ್ಟರ್ ಬಳಿ ಗಡಿ ಒಳನುಸುಳಲು ಉಗ್ರರಿಬ್ಬರು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಯೋಧರ ಗುಂಡೇಟಿಗೆ ಬಲಿಯಾಗಿದ್ದಾರೆ.
ಇಂದು ಗಡಿಯೊಳಗೆ ಅತಿಕ್ರಮವಾಗಿ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರರನ್ನು ಭಾರತೀಯ ಯೋಧರು ಹತ್ಯೆಗೈದಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಮತ್ತೊಂದೆಡೆ ಭಾರತದ ಗಡಿಭಾಗದಲ್ಲಿರುವ ಶಾಲಾಬಾತ್ ಗ್ರಾಮವನ್ನು ಆಕ್ರಮಿಸಿಕೊಂಡಿರುವ ಪಾಕಿಸ್ತಾನದ ಅತಿಕ್ರಮಣಕಾರರ ವಿರುದ್ಧದ ಕಾರ್ಯಾಚರಣೆ 11 ದಿನಕ್ಕೆ ಕಾಲಿಟ್ಟಿದ್ದು, ಅತಿಕ್ರಮಣಕಾರರನ್ನು ಹಿಮ್ಮೆಟಿಸುವ ಕಾರ್ಯ ಕೊನೆಯ ಹಂತಕ್ಕೆ ತಲುಪಿದೆ.
ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯ ಕುಪ್ವಾರ ಜಿಲ್ಲೆಯ ಕೇರನ್ ಸೆಕ್ಟರ್ ಬಳಿಯ ಗ್ರಾಮವನ್ನು ಸುಮಾರು 30 ರಿಂದ 40 ಅತಿಕ್ರಮಣಕಾರರು ಸೆ. 24ರಂದು ಆಕ್ರಮಿಸಿಕೊಂಡಿದ್ದರು. ಅಂದು ಶುರುವಾದ ತೆರವು ಕಾರ್ಯಾಚರಣೆ ಇಂದು ಹನ್ನೊಂದನೆ ದಿನಕ್ಕೆ ಕಾಲಿಟ್ಟಿದ್ದಿದೆ. ಅವರನ್ನು ಹಿಮ್ಮೆಟಿಸಲು ಭಾರತೀಯ ಯೋಧರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾರ್ಯಾಚರಣೆ ಕೊನೆಯ ಹಂತ ತಲುಪಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕಳೆದ 11 ದಿನಗಳ ಹಿಂದೆ ಒಳನುಸುಳಿರುವ ಸೈನಿಕರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದು, ಶಾಲಾಬಾತ್ ಗ್ರಾಮದಲ್ಲಿ 1300 ಗುರ್ಕಾ ರೈಫಲ್ಸ್ ಯೋಧರು ಅತಿಕ್ರಮಣಕಾರರ ಮೇಲೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ.
ದಾಳಿಯಲ್ಲಿ ಇಲ್ಲಿಯವರೆಗೆ 12 ಮಂದಿ ಅತಿಕ್ರಮಣಕಾರರನ್ನು ಭಾರತೀಯ ಯೋಧರು ಹತ್ಯೆಗೈದಿದ್ದಾರೆ. ಪ್ರತಿದಾಳಿಯಲ್ಲಿ ಅತಿಕ್ರಮಣಕಾರರ ಗುಂಡೇಟಿಗೆ ಐವರು ಭಾರತೀಯ ಯೋಧರು ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ. ಇಲ್ಲಿಯವರೆಗು ಘಟನಾ ಸ್ಥಳದಿಂದ ಯಾವುದೇ ಅತಿಕ್ರಮಣಕಾರರ ಮೃತದೇಹಗಳನ್ನು ಭಾರತೀಯ ಯೋಧರು ವಶಪಡಿಸಿಕೊಂಡಿಲ್ಲ. ಮೃತದೇಹಗಳನ್ನು ಅತಿಕ್ರಮಣಕಾರರೇ ಹೊತ್ತೋಯ್ದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಪಾಕಿಸ್ತಾನ ಸೈನಿಕರು ಮತ್ತೊಮ್ಮೆ ತಮ್ಮ ಕೌರ್ಯ ಮೆರೆದಿದ್ದು, ಇದರೊಂದಿಗೆ ಎರಡನೇ ಭಾರಿ ಕಾರ್ಗಿಲ್ ಯುದ್ಧಕ್ಕೆ ಪಾಕಿಸ್ತಾನಿ ಸೈನಿಕರು ಪ್ರಚೋಧನೆ ನೀಡುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರು ಭಾನುವಾರ ಅಮೆರಿಕಾದ ನ್ಯೂಯಾರ್ಕ್ನಲ್ಲಿ ಪರಸ್ಪರ ಭೇಟಿ ಮಾಡಿ ಉಭಯ ದೇಶಗಳ ಗಡಿಯಲ್ಲಿ ಶಾಂತಿ ಕಾಪಾಡುವ ಸಂಬಂಧ ಚರ್ಚಿಸಿದ್ದರು. ಆದರೆ ಒಂದು ಕಡೆ ಪಾಕಿಸ್ತಾನ ಶಾಂತಿ ಮಾತುಕತೆ ನಡೆಸುತ್ತಿದ್ದರೆ ಮತ್ತೊಂದೆಡೆ ಪಾಕಿಸ್ತಾನ ಸೈನಿಕರು ಗಡಿ ಭಾಗದಲ್ಲಿ ಅಪ್ರಚೋಧಿತ ದಾಳಿ ಮುಂದುವರೆಸಿರುವುದು ಟೀಕೆಗೆ ಗುರಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


